

ಬೆಂಗಳೂರು: ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್) ಕೋಟ್ಯಂತರ ರೂ. ಅವ್ಯವಹಾರ ಪ್ರಕರಣದ ಸಂಬಂಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಇಂಜಿನಿಯರ್ ಸೇರಿ ನಾಲ್ವರ ನಿವಾಸದ ಮೇಲೆ ದಾಳಿ ನಡೆಸಿದ್ದು, ಭ್ರಷ್ಟರ ಇನ್ನಷ್ಟು ಅಕ್ರಮ ಬಯಲಿಗೆಳೆದಿದ್ದಾರೆ.
ಬಿಬಿಎಂಪಿ ಸಹಾಯಕ ಅಭಿಯಂತರ ಎಂ.ಎನ್. ದೇವರಾಜು ಎಚ್ಎಸ್ಆರ್ ಲೇಔಟ್ನಲ್ಲಿ ಹೊಂದಿರುವ ಮನೆ, ಮಧ್ಯವರ್ತಿಗಳಾದ ಬಿ. ನಾಗರಾಜುಗೆ ಸೇರಿದ ದೊಡ್ಡಗುಬ್ಬಿಯ ಯರಪ್ಪನಹಳ್ಳಿಯಲ್ಲಿರುವ ನಿವಾಸ, ಕೆ.ಪಿ.ನಾಗೇಶ್ ಅವರ ಬಿದರಹಳ್ಳಿ ಕಣ್ಣೂರಿನಲ್ಲಿರುವ ಮನೆ, ಟಿಡಿಆರ್ ಅರ್ಜಿದಾರ ಸುಬ್ಬರಾವ್ ಬಿದರಹಳ್ಳಿಯ ರಾಂಪುರದಲ್ಲಿ ಹೊಂದಿರುವ ನಿವಾಸದ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.
ಬಿದರಹಳ್ಳಿಯ ರಾಂಪುರದಲ್ಲಿ ರುವ ಸರ್ವೆ ನಂ.149 ಹಾಗೂ ಈ ಜಾಗದಲ್ಲಿ ಕೊತ್ತನೂರು- ಆವಲಹಳ್ಳಿ ಮುಖ್ಯರಸ್ತೆಯ ವಿಸ್ತರಣೆಗೆ ಸಂಬಂಧಿಸಿದಂತೆ ಟಿಡಿಆರ್ ಅರ್ಜಿ ಯನ್ನು ಪ್ರಸ್ತುತ ಸ್ವಾಧೀನಾನುಭವದಲ್ಲಿರುವ ಕಟ್ಟಡಗಳ ಮಾಲೀಕರಿಂದ ಪಡೆಯದೆ, ಆರ್ಟಿಸಿಯಲ್ಲಿ ಹೆಸರಿರುವ ಹಿಂದಿನ ಜಮೀನಿನ ಮಾಲೀಕರಿಂದ ಪಡೆಯಲಾಗಿದೆ. ಬಿಬಿಎಂಪಿ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಅಳತೆಗಳನ್ನು ಪಡೆದು ರೆವಿನ್ಯೂ ನಕ್ಷೆಯನ್ನು ತಯಾರಿಸಿದ್ದರು. ಈ ನಕ್ಷೆಯಲ್ಲಿ ರಾಂಪುರ ಗ್ರಾಮದ ಸರ್ವೆ ನಂ.149 ರಲ್ಲಿ ಒಟ್ಟು 6 ಕಟ್ಟಡಗಳು ರಸ್ತೆ ವಿಸ್ತರಣೆಗೆ ಒಳ ಪಡುವುದಾಗಿ ಹಾಗೂ ಈ ಕಟ್ಟಡಗಳ ಮಾಲೀಕರು ಆರ್ಟಿಸಿಯಲ್ಲಿ ಹೆಸರಿಸುವ ಈ ಹಿಂದಿನ ಭೂಮಾಲೀಕ ಆರ್.ಕೆ. ಸುಬ್ಬರಾವ್ ಎಂದು ನಮೂದಿಸಲಾಗಿದೆ. ಆದರೆ, ಕಳೆದ 25 ವರ್ಷಗಳಿಂದ ಇಲ್ಲಿ ಬೇರೆಬೇರೆ ಮಾಲೀಕರು ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದು, ಗ್ರಾಮ ಪಂಚಾಯಿತಿಯಲ್ಲಿ ಖಾತಾ ಪಡೆದು ಪ್ರತ್ಯೇಕ ವಿದ್ಯುತ್ ಸಂಪರ್ಕ ಹೊಂದಿದ್ದರು.
ಅಕ್ರಮ ಡಿಆರ್ಸಿ ವಿತರಣೆ: ರೆವಿನ್ಯೂ ನಕ್ಷೆಯಲ್ಲಿ ನಮೂದಿಸಿದ 6 ಕಟ್ಟಡಗಳ ಮೌಲ್ಯಮಾಪನವನ್ನು ತಯಾರಿಸಿ ಈ ಮೌಲ್ಯವನ್ನು ಡಿಆರ್ಸಿ (ಅಭಿವೃದ್ಧಿ ಹಕ್ಕು ಪ್ರಮಾಣಪತ್ರ) ವಿಸ್ತೀರ್ಣಕ್ಕೆ ಪರಿವರ್ತಿಸುವಾಗ ಗ್ರಾಮ ಪಂಚಾಯಿತಿ ಖಾತಾ ಹೊಂದಿರುವ ಕಟ್ಟಡಗಳನ್ನು ಕೃಷಿ ಭೂಮಿಯಲ್ಲಿರುವುದಾಗಿ ಉಲ್ಲೇಖಿಸಲಾಗಿತ್ತು.
ಕೃಷಿ ಭೂಮಿಯ ಮಾರ್ಗಸೂಚಿ ದರಗಳನ್ನು ಕಾನೂನುಬಾಹಿರವಾಗಿ ಅಳವಡಿಸಿಕೊಂಡು ವಾಸ್ತವವಾಗಿ ನೀಡಬೇಕಿದ್ದ 6,314.44 ಚ.ಮೀಟರ್ಗಳಿಗೆ ಬದಲಾಗಿ ಅಕ್ರಮವಾಗಿ ಬಿಬಿಎಂಪಿ ಅಧಿಕಾರಿಗಳು 1,6151.19 ಚ.ಮೀ.ಗಳ ಡಿಆರ್ಸಿ ವಿತರಣೆ ಮಾಡಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಕಟ್ಟಡ ಮೌಲ್ಯಮಾಪನ ಮಾಡುವ ವೇಳೆ 15ರಿಂದ 20 ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ಹಳೆಯ ಕಟ್ಟಡಗಳನ್ನು 6 ವರ್ಷಗಳ ಕಟ್ಟಡಗಳೆಂದು ನಮೂದಿಸಿ ಹೆಚ್ಚು ಮೌಲ್ಯವನ್ನು ಅಕ್ರಮವಾಗಿ ನಿಗದಿಪಡಿಸಿದ್ದರು.
ರಸ್ತೆ ವಿಸ್ತರಣೆಯನ್ನೇ ಮಾಡಿಲ್ಲ
ಸರ್ಕಾರ ಹೊರಡಿಸಿರುವ ಅಧಿಸೂಚನೆ, ಸುತ್ತೋಲೆ ಮತ್ತು ಕಚೇರಿ ಆದೇಶಗಳಲ್ಲಿ ಸೂಚಿಸಿರುವಂತೆ ರಸ್ತೆ ವಿಸ್ತರಣೆ ಸಲುವಾಗಿ ಹಕ್ಕು ಬಿಡುಗಡೆ ಪತ್ರವನ್ನು ಬಿಬಿಎಂಪಿ ಹೆಸರಿಗೆ ಪಡೆದ ನಂತರ ರಸ್ತೆ ವಿಸ್ತರಣೆಗೆ ಒಳಪಡುವ ಜಾಗದಲ್ಲಿರುವ ಕಟ್ಟಡಗಳನ್ನು ಡೆಮಾಲಿಷನ್ ಮಾಡಿ ಜಾಗದ ಭೌತಿಕ ಸ್ವಾಧೀನ ಪಡೆದಿಲ್ಲ. ಸ್ವತ್ತು ಖಾತಾವನ್ನು ಬಿಬಿಎಂಪಿ ಹೆಸರಿಗೆ ವರ್ಗಾಯಿಸದೆ, ಈ ವಿವರಗಳನ್ನು ಬಿಬಿಎಂಪಿಯ ರಸ್ತೆ ರಿಜಿಸ್ಟರ್ನಲ್ಲಿ ನಮೂದಿಸದೆ, ಅಕ್ರಮವಾಗಿ ಡಿಆರ್ಸಿ ಸಂಖ್ಯೆ 002639 ಅನ್ನು 2013ರ ಆ.29ರಂದು ವಿತರಣೆ ಮಾಡಲಾಗಿದೆ. ಡಿಆರ್ಸಿ ಸಂಖ್ಯೆ 002639ನ್ನು ಟಿಡಿಆರ್ ಅರ್ಜಿದಾರರ ಪರವಾಗಿ ಪಡೆದ ಟಿಡಿಆರ್ ಬ್ರೋಕರ್ಗಳು ಕೋಟ್ಯಂತರ ರೂ.ಗೆ ಮಾರಾಟ ಮಾಡಿ ಅಕ್ರಮವಾಗಿ ಲಾಭ ಮಾಡಿಕೊಂಡಿದ್ದಾರೆ. ಆದರೆ, ಡಿಆರ್ಸಿ ನೀಡಿ 6 ವರ್ಷ ಕಳೆದರೂ ಟಿಡಿಆರ್ ನೀಡಿರುವ ಕಟ್ಟಡಗಳನ್ನು ತೆರವು ಮಾಡಿ ಜಾಗದ ಭೌತಿಕ ಸ್ವಾಧೀನವನ್ನು ಪಡೆದು ರಸ್ತೆ ವಿಸ್ತರಣೆ ಮಾಡಿಲ್ಲ.
ಏನಿದು ಪ್ರಕರಣ?
ಕೆಲ ಸರ್ಕಾರಿ ಅಧಿಕಾರಿಗಳು ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಖಾಸಗಿ ವ್ಯಕ್ತಿಗಳೊಂದಿಗೆ ಶಾಮೀಲಾಗಿ ಬಿಬಿಎಂಪಿ ರಸ್ತೆ ವಿಸ್ತರಣೆಗೆ ವಶಪಡಿಸಿಕೊಳ್ಳಬೇಕಾದ ನಿವೇಶನಗಳು ಮತ್ತು ಕಟ್ಟಡಗಳ ಜಾಗಕ್ಕಿಂತ ಹೆಚ್ಚು ಜಾಗಕ್ಕೆ ಬೆಲೆ ನಿಗದಿ ಮಾಡಿಸಿ ಗ್ರಾಮ ಪಂಚಾಯಿತಿಯಲ್ಲಿ ಖಾತಾ ಹೊಂದಿರುವುದನ್ನು ಮರೆಮಾಚಿದ್ದರು. ಕೃಷಿ ಭೂಮಿಯ ದರಗಳನ್ನು ಕಟ್ಟಡಗಳ ಮೌಲ್ಯಮಾಪನಗಳನ್ನು ನಿಗದಿಪಡಿಸುವಾಗ ಟಿಡಿಆರ್ ವಿಸ್ತೀರ್ಣವನ್ನು ಕಾನೂನುಬಾಹಿರವಾಗಿ ಹೆಚ್ಚಾಗಿ ವಿತರಣೆ ಮಾಡಿದ್ದರು. ಆ ಮೂಲಕ ಖಾಸಗಿ ವ್ಯಕ್ತಿಗಳಿಗೆ ಅಕ್ರಮ ಲಾಭ ಮಾಡಿಕೊಟ್ಟು ಸರ್ಕಾರಕ್ಕೆ ಕೋಟ್ಯಂತರ ರೂ.ಗಳ ನಷ್ಟವುಂಟು ಮಾಡಿದ್ದರು. ಈ ಜಾಗದಲ್ಲಿ ಸ್ವಾಧೀನಾನುಭವದಲ್ಲಿರುವ
ನಿವೇಶನ ಮಾಲೀಕರಿಗೆ
ಸರ್ಕಾರದಿಂದ ಯಾವುದೇ ಪರಿಹಾರ ಸಿಗದಂತೆ ನೋಡಿಕೊಂಡಿದ್ದರು. ಬಿಬಿಎಂಪಿ ವತಿಯಿಂದ ಹೊರಡಿಸಲಾದ ಸುತ್ತೋಲೆಯಂತೆ ಹಕ್ಕು ಬಿಡುಗಡೆ ಪತ್ರ ಪಡೆದ ಕಟ್ಟಡ, ಜಾಗದ ಭೌತಿಕ ಸ್ವಾಧೀನ ಪಡೆಯದೆ ಖಾತಾವನ್ನು ಬಿಬಿಎಂಪಿ ಹೆಸರಿಗೆ ವರ್ಗಾಯಿಸದೆ ಅಕ್ರಮವಾಗಿ ನಕಲಿ ಭೂಮಾಲೀಕರಿಗೆ ಡಿಆರ್ಸಿ ವಿತರಣೆ ಮಾಡಿರುವುದು ಎಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.