

ಬೆಂಗಳೂರು: ನಿನ್ನೆಯಿಂದ ಕುತೂಹಲ ಕೆರಳಿಸಿರುವ ಕೆಎಎಸ್ ಅಧಿಕಾರಿ ಡಾ.ಸುಧಾ ಅವರ ಮನೆ ಮೇಲಿನ ದಾಳಿ ಪ್ರಕರಣದ ಕೌತುಕ ಇನ್ನೂ ಮುಂದುವರಿದಿದೆ. ಅವರ ಮನೆಯಲ್ಲಿ ಅಪಾರ ಚಿನ್ನಾಭರಣ ಹಾಗೂ ಅಕ್ರಮ ಆಸ್ತಿ ಕುರಿತು ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಇರುವ ಅವರ ಆಪ್ತರು-ಸಂಬಂಧಿಕರ ಮನೆ ಮೇಲೂ ಎಸಿಬಿ ಅಧಿಕಾರಿಗಳು ನಿನ್ನೆ ದಾಳಿ ನಡೆಸಿದ್ದಾರೆ.
ಅದರ ಮುಂದುವರಿಕೆ ಎಂಬಂತೆ ಸುಧಾ ಆಪ್ತೆ ರೇಣುಕಾ ಚಂದ್ರಶೇಖರ್ ಅವರ ಬೆಂಗಳೂರಿನ ಬ್ಯಾಟರಾಯನಪುರದಲ್ಲಿರುವ ಫ್ಲ್ಯಾಟ್ ಮೇಲೂ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಲ್ಲಿ ಸಿಕ್ಕ ದಾಖಲೆಗಳನ್ನು ನೋಡಿ ಎಸಿಬಿ ಅಧಿಕಾರಿಗಳಿಗೂ ಅಚ್ಚರಿ ಆಗಿದೆ ಎನ್ನಲಾಗಿದೆ.
ಸುಧಾಗೆ ರೇಣುಕಾ ಏಜೆಂಟ್?: ಸುಧಾ ಹೇಳಿದ ಕಡೆಗೆ ತೆರಳಿ ಹಣ ಪಡೆಯುತ್ತಿದ್ದ ಅನುಮಾನದ ಮೇಲೆ ರೇಣುಕಾ ಮನೆ ಮೇಲೆ ದಾಳಿ ನಡೆದಿದೆ ಎನ್ನಲಾಗಿದೆ. ರೇಣುಕಾ ಮನೆಯಲ್ಲಿ ಬರೋಬ್ಬರಿ 3.5 ಕೆ.ಜಿ. ಚಿನ್ನ, 7 ಕೆ.ಜಿ. ಬೆಳ್ಳಿ, 36 ಲಕ್ಷ ರೂ. ನಗದು ಮಾತ್ರವಲ್ಲದೆ ಸುಮಾರು 250 ಕೋಟಿ ರೂ. ಮೌಲ್ಯದ ಆಸ್ತಿಗಳ ಪತ್ರಗಳೂ ಸಿಕ್ಕಿವೆ. ಅಲ್ಲದೆ ರೇಣುಕಾ ಮನೆಯಲ್ಲಿ 40 ಬ್ಯಾಂಕ್ ಪಾಸ್ಬುಕ್ಗಳು ಪತ್ತೆಯಾಗಿದ್ದು, ರೇಣುಕಾ 4 ಕೋಟಿ ರೂ. ಡೆಪಾಸಿಟ್ ಮಾಡಿದ್ದಾರೆ. ಜತೆಗೆ ನೂರಕ್ಕೂ ಹೆಚ್ಚು ಚೆಕ್ಗಳು, ಅಗ್ರಿಮೆಂಟ್ ಪೇಪರ್ಗಳೂ ಸಿಕ್ಕಿವೆ. ಬ್ಯಾಂಕ್ ವಹಿವಾಟಿನ ವಿವರ ಕಲೆ ಹಾಕಲಿಕ್ಕೇ ಮೂರ್ನಾಲ್ಕು ದಿನಗಳು ಬೇಕಾಗಲಿವೆ ಎಂದು ಎಸಿಬಿ ಮೂಲಗಳು ತಿಳಿಸಿವೆ.
ರೇಣುಕಾ ನಿವೃತ್ತ ಡಿವೈಎಸ್ಪಿ ಚಂದ್ರಶೇಖರ್ ಅವರ ಪತ್ನಿ. ಇವರ ಪುತ್ರ ಎಇಇ ಆಗಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮದಲ್ಲೂ ತೊಡಗಿಸಿಕೊಂಡಿರುವ ರೇಣುಕಾ, ನಾಲ್ಕು ಕಂಪನಿಗಳ ಹೆಸರಿನಲ್ಲಿ ವಹಿವಾಟು ನಡೆಸುತ್ತಿದ್ದರು. ಈ ರಿಯಲ್ ಎಸ್ಟೇಟ್ ಕಂಪನಿಗಳಲ್ಲಿ ಸುಧಾ ಬೇನಾಮಿ ಹೂಡಿಕೆ ಇದೆಯೇ ಎಂಬುದರ ಕುರಿತು ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ದಾಳಿ ಸಂದರ್ಭ ರೇಣುಕಾ ತಂದೆಯ ನಿಧನ: ದಾಳಿ ಸಂದರ್ಭದಲ್ಲಿ ರೇಣುಕಾ ತಂದೆಯ ಸಾವಿನ ಸುದ್ದಿ ಬಂದಿದ್ದ ಹಿನ್ನೆಲೆಯಲ್ಲಿ, ದಾಳಿಯ ಅರ್ಧದಲ್ಲೇ ರೇಣುಕಾ ಮತ್ತು ಚಂದ್ರಶೇಖರ್ ಮನೆಯಿಂದ ಹೊರಟಿದ್ದಾರೆ. ಅವರ ಮಕ್ಕಳ ಸಮ್ಮುಖದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ಮುಂದುವರಿಸಿ, ಪರಿಶೀಲನೆ ನಡೆಸಿದ್ದಾರೆ. ಎಸ್ಪಿ ಕುಲ್ದೀಪ್ ಕುಮಾರ್ ನೇತೃತ್ವದಲ್ಲಿ ಡಿವೈಎಸ್ಪಿ ಪ್ರತಾಪ್ ರೆಡ್ಡಿ ಮತ್ತು ತಂಡ ದಾಳಿ ನಡೆಸಿದೆ. (ದಿಗ್ವಿಜಯ ನ್ಯೂಸ್)