ಪ್ರಸಕ್ತ ಶೈಕ್ಷಣಿಕ ವರ್ಷದಿಂದ ರಾಯಚೂರು ವಿವಿ ಆರಂಭಿಸಿ; ಹೈ.ಕ. ಹೋರಾಟ ಸಮಿತಿ ಉಪಾಧ್ಯಕ್ಷ ಡಾ.ರಜಾಕ್ ಉಸ್ತಾದ್ ಆಗ್ರಹ

RAJAK USTAD (RAICHUR)
Published on

ರಾಯಚೂರು: ರಾಯಚೂರು ವಿಶ್ವವಿದ್ಯಾಲಯ ಕಾರ್ಯಾರಂಭ ಕಾರ್ಯ ಮುಂದೂಡುತ್ತಾ ಬರಲಾಗುತ್ತಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ವಿವಿ ಕಾರ್ಯಾರಂಭಕ್ಕೆ ಅಗತ ್ಯಕ್ರಮ ಕೈಗೊಳ್ಳಬೇಕು ಎಂದು ಹೈ.ಕ. ಹೋರಾಟ ಸಮಿತಿ ಉಪಾಧ್ಯಕ್ಷ ಡಾ.ರಜಾಕ್ ಉಸ್ತಾದ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ವಿವಿ ಕಾರ್ಯಾರಂಭ ಸರ್ಕಾರದ ಪಂಚವಾರ್ಷಿಕ ಯೋಜನೆಯಂತೆ ಮುಂದೂಡುತ್ತಾ ಬರಲಾಗುತ್ತಿದೆ. ಈ ಕುರಿತು ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ನಿಯೋಗ ತೆರಳಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.

2017ರ ಬಜೆಟ್‌ನಲ್ಲಿ ರಾಯಚೂರು ವಿವಿ ಘೋಷಣೆ ಮಾಡಿ ವಿಶೇಷಾಧಿಕಾರಿ ನೇಮಕ ಮಾಡಿದರೂ ವಿವಿ ಪ್ರಾರಂಭವಾಗದೇ ಹೋದಾಗ ಸುಗ್ರೀವಾಜ್ಞೆ ಮೂಲಕ ಪ್ರಾರಂಭಕ್ಕೂ ರಾಜ್ಯಪಾಲರು ಸಮ್ಮತಿಸಲಿಲ್ಲ. ಮೇ ತಿಂಗಳಲ್ಲಿ ವಿವಿ ಆರಂಭಕ್ಕೆ ರಾಜ್ಯಪಾಲರ ಅಂಕಿತ ದೊರೆತರೂ ವಿವಿ ಕಾರ್ಯಾರಂಭವಾಗಿಲ್ಲ.

ಎರಡು ದಿನಗಳ ಹಿಂದೆ ಸರ್ಕಾರ ವಿವಿಗೆ ಕುಲಪತಿಯನ್ನಾಗಿ ಡಾ.ಹರೀಶ್ ರಾಮಸ್ವಾಮಿಯನ್ನು ನೇಮಕ ಮಾಡಿದ್ದು, ವಿವಿ ಕಾರ್ಯಾರಂಭ ಮಾಡದೆ ಕುಲಪತಿಗೆ ಕೆಲಸ ಇಲ್ಲದಂತಾಗಲಿದೆ. ವಿವಿಗೆ ಕಾಲೇಜುಗಳ ಸಂಯೋಜನೆ ಪಡೆಯಲು ಕಾಯದೇ ವಿವಿ ಕಾರ್ಯಾರಂಭ ಮಾಡಬೇಕು ಎಂದು ಡಾ.ರಜಾಕ್ ಉಸ್ತಾದ್ ಒತ್ತಾಯಿಸಿದರು. ಸಮಿತಿ ಪದಾಧಿಕಾರಿಗಳಾದ ಶಿವಕುಮಾರ ಯಾದವ್, ವೀರೇಶ ಹೀರಾ, ಕೆ.ರಾಜೇಶಕುಮಾರ, ಮಹ್ಮದ್ ರಫಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net