

ಪರಶುರಾಮಪುರ: ಹಿಂದುಳಿದ, ಶೋಷಿತ ಸಮುದಾಯದ ಜನರು ತಮ್ಮ ಸಾಂಸ್ಕೃತಿಕ ವೀರರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸಹಕಾರಿ ಆಗಲಿದೆ ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಹೇಳಿದರು.
ಚೌಳೂರು ಗ್ರಾಮದ ಗೊಲ್ಲರಹಟ್ಟಿಯಲ್ಲಿ ಗುರುವಾರ ಶ್ರೀಕೃಷ್ಣ ವಿಗ್ರಹದ ಪ್ರತಿಷ್ಟಾಪನೆ ಹಾಗೂ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಬಹಳಷ್ಟು ವರ್ಗದ ಜನರು ಅನಾದಿ ಕಾಲದಿಂದಲೂ ತಮ್ಮ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಆದರೆ, ಇಂದಿನ ಆಧುನಿಕ ಕಾಲಘಟ್ಟಕ್ಕೆ ಅನುಗುಣವಾಗಿ ಗೊಲ್ಲರಹಟ್ಟಿಗಳು ಬದಲಾಗಬೇಕಿದೆ. ಕೇವಲ ದೇವಸ್ಥಾನ ನಿರ್ಮಿಸುವುದಕ್ಕಷ್ಟೇ ಸೀಮಿತ ಆಗಬಾರದು. ಶಾಲೆ, ಗ್ರಂಥಾಲಯ ಹಾಗೂ ಅಂಗನವಾಡಿ ಕೇಂದ್ರಗಳನ್ನು ಅಭಿವೃದ್ಧಿಪಡಿಸಬೇಕು. ಶೈಕ್ಷಣಿಕ ಕ್ಷೇತ್ರದಲ್ಲಿ ಮೊದಲ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಡಿವೈಎಸ್‌ಪಿ ರಾಜಣ್ಣ ಮಾತನಾಡಿ, ಪ್ರತೀ ಹಳ್ಳಿಗಳಲ್ಲೂ ಎಲ್ಲ ಸಮುದಾಯದವರು ತಮ್ಮ ಸಂಪ್ರದಾಯ ಅಳವಡಿಸಿಕೊಳ್ಳುವುದು ಉತ್ತಮ ನಡೆ. ಜತೆಗೆ ಮಕ್ಕಳಿಗೆ ಗುಣಮಟ್ಟ ಮತ್ತು ತಂತ್ರಜ್ಞಾನ ಶಿಕ್ಷಣ ಕೊಡಿಸಲು ಮುಂದಾಗಬೇಕು. ಮೌಢ್ಯಾಚರಣೆಗಳಿಂದ ಹೊರಬರಬೇಕು ಎಂದು ಸಲಹೆ ನೀಡಿದರು.
ಗ್ರಾಮದ ಮುಖಂಡರಾದ ದೇವರಾಜು, ಕುಮಾರ, ವೀರಭದ್ರಪ್ಪ, ಬಸವರಾಜು, ತಿಪ್ಪೇಸ್ವಾಮಿ, ಕರಿಯಣ್ಣ, ವೀರೇಶ, ವಿಜಯಕುಮಾರ, ಕೃಷ್ಣಪ್ಪ, ಕ್ಯಾತಣ್ಣ, ದ್ಯಾಮಣ್ಣ, ಚಿಕ್ಕಣ್ಣ ಇದ್ದರು.