

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಸಾಮಾಜಿಕ ವಾತಾವರಣ ಹದಗೆಡುತ್ತಿರುವ ಸಂದರ್ಭದಲ್ಲಿ ಯುವಜನತೆಗೆ ಸಮಾಜಸ್ನೇಹಿ ಚಿಂತನೆಗಳ ಕುರಿತು ಅರಿವು ಮೂಡಿಸುವುದು ಅಗತ್ಯ ಎಂದು ನಿವೃತ್ತ ಎನ್‌ಸಿಸಿ ಅಧಿಕಾರಿ ಮೇಜರ್ ಎಸ್.ಮಹಾಬಲೇಶ್ವರ್ ಹೇಳಿದರು.
ನಗರದ ಎಚ್‌ಇಎಚ್‌ಎಸ್ ಸಮೂಹ ವಿದ್ಯಾ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂಭ್ರಮ-2023 ಪ್ಯಾರಾ ಮೆಡಿಕಲ್ ತರಗತಿಗಳ ಶೈಕ್ಷಣಿಕ ಸಮಾರೋಪದಲ್ಲಿ ಮಾತನಾಡಿದರು. ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ತಾಯಿ, ಗುರು ಹಾಗೂ ಸ್ನೇಹಿತರ ಪ್ರಭಾವ ಹಾಗೂ ಒತ್ತಾಸೆ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಈ ಹಂತದಲ್ಲಿ ಹೊಣೆಯಾಧಾರಿತ ವ್ಯಕ್ತಿತ್ವಗಳು ಮಾತ್ರ ಮುಂದಿನ ಪೀಳಿಗೆಯನ್ನು ಸಶಕ್ತವಾಗಿ ಪ್ರಭಾವಿಸಬಲ್ಲವು. ಶಾಲಾ-ಕಾಲೇಜುಗಳ ಪರೀಕ್ಷೆ ಬಗ್ಗೆ ಗಮನ ಹರಿಸುವ ವಿದ್ಯಾರ್ಥಿಗಳು ನಿತ್ಯ ಬದುಕಿನ ಸವಾಲುಗಳನ್ನು ಎದುರಿಸುವ ನೈಜ ಪರೀಕ್ಷೆಯ ಬಗ್ಗೆ ಹೆಚ್ಚು ಆಸಕ್ತಿ ವಹಿಸದಿರುವುದೇ ಹಲವು ಸಮಸ್ಯೆಗಳಿಗೆ ಕಾರಣ ಎಂದರು.
ರಾಜ್ಯ ವೈಜ್ಞಾನಿಕ ಪರಿಷತ್ ಅಧ್ಯಕ್ಷ ಡಾ.ಹುಲಿಕಲ್ ನಟರಾಜ್ ಮಾತನಾಡಿ, ವಿದ್ಯಾರ್ಥಿ ಜೀವನ ಸವಾಲುಗಳನ್ನು ಎದುರಿಸುವ ಕಷ್ಟದ ಅವಧಿಯಾಗಿದ್ದು, ಅದನ್ನು ಕೇವಲ ಮೋಜಿಗಾಗಿ ಪರಿಗಣಿಸಿದರೆ, ಬದುಕಿನಲ್ಲಿ ಕಷ್ಟಗಳನ್ನು ನಿರಂತರವಾಗಿ ಎದುರಿಸಬೇಕಾಗುತ್ತದೆ. ಅದೇ ವಿದ್ಯಾರ್ಥಿ ಬದುಕನ್ನು ಕಷ್ಟಪಟ್ಟು ಅಧ್ಯಯನ ಮಾಡುವ ಮೂಲಕ ಸದುಪಯೋಗಪಡಿಸಿಕೊಂಡರೆ ಜೀವನ ಸುಖಕರವಾಗಿರುತ್ತದೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ತ.ನ.ಪ್ರಭುದೇವ್ ಮಾತನಾಡಿ, ವಿದ್ಯಾರ್ಥಿಗಳು ಸಮಾಜಕ್ಕೆ ನಿರ್ಧಿಷ್ಟ ಕೊಡುಗೆ ನೀಡುವ ವ್ಯಕ್ತಿತ್ವಗಳಾಗಿ ಬೆಳೆಯಬೇಕು. ಆಗ ಮಾತ್ರ ಕಲಿತ ವಿದ್ಯೆಗೆ ಸಾರ್ಥಕತೆ ದೊರೆಯುತ್ತದೆ ಎಂದರು.