

ಮಡಿಕೇರಿ: ಜಿಲ್ಲೆಯಲ್ಲಿನ ಬುಡಕಟ್ಟು ಭಾಷೆಗಳನ್ನು ಉಳಿಸಿ, ಬೆಳೆಸುವಂತಾಗಲು ಮತ್ತೊಂದು ಅಕಾಡೆಮಿ ಅತ್ಯಗತ್ಯ. ಆ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರೆಯಬೇಕು ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.
೧೧ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಮೂಲ ಸಂಸ್ಕೃತಿ ಉಳಿಸುವಲ್ಲಿ ಬುಡಕಟ್ಟು ಸಮುದಾಯಗಳ ಭಾಷೆ ಅಭಿವೃದ್ಧಿಗೆ ಮುಂದಾಗಬೇಕು. ಆ ನಿಟ್ಟಿನಲ್ಲಿ ಜಿಲ್ಲೆಯಲ್ಲಿನ ಯರವ, ಕುಡಿಯ, ಕಾಡುಕುರುಬ, ಜೇನುಕುರುಬ, ಬೆಟ್ಟಕುರುಬ, ಸೋಲಿಗ ಹೀಗೆ ಬುಡಕಟ್ಟು ಸಮುದಾಯಗಳು ತಮ್ಮದೇ ಆದ ಭಾಷೆ ಮಾತನಾಡುತ್ತಿದ್ದು, ಇವುಗಳು ಕನ್ನಡದ ಉಪ ಭಾಷೆಗಳಾಗಿದ್ದು, ಇವುಗಳನ್ನು ಉಳಿಸಿ ಬೆಳೆಸಬೇಕಿದೆ ಎಂದು ಕೆ.ಜಿ.ಬೋಪಯ್ಯ ತಿಳಿಸಿದರು.
ಜಿಲ್ಲೆಯಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಗಳು ಸ್ಥಾಪನೆಯಾಗಿದೆ. ಜತೆಗೆ ಬುಡಕಟ್ಟು ಸಮಾಜಗಳು ಮಾತನಾಡುವ ಭಾಷೆ ಉಳಿಸಿ, ಬೆಳೆಸುವಲ್ಲಿ ಅಕಾಡೆಮಿ ಸ್ಥಾಪನೆ ಸಮಯೋಚಿತವಾಗಿದೆ ಎಂದು ನುಡಿದರು.
ಆಧುನಿಕತೆ ಬೆಳೆದಂತೆ ನಗರ ಪಟ್ಟಣ ಪ್ರದೇಶಗಳಲ್ಲಿ ಮಕ್ಕಳಿಗೆ ಕನ್ನಡ ಭಾಷೆ ಬರದಿದ್ದರೆ ಹೆಮ್ಮೆಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಒಳ್ಳೆಯ ಬೆಳವಣಿಗೆಯೇ ಎಂದು ಆತ್ಮವಲೋಕನ ಮಾಡಬೇಕಿದೆ. ಇಂತಹುದು ಗ್ರಾಮೀಣ ಪ್ರದೇಶಗಳಿಗೂ ಇತ್ತೀಚೆಗೆ ತಲುಪುತಿದೆ ಎಂದರು.
ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ಎಂಬುದನ್ನು ಯಾರೂ ಸಹ ಮರೆಯಬಾರದು. ಭಾರತೀಯ ಸಂಸ್ಕೃತಿಯು ಅನೇಕತೆಯಲ್ಲಿ ಏಕತೆಯನ್ನು ಹೊಂದಿದ್ದು, ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲೀಷ್ ವ್ಯವಹಾರಿಕ ಭಾಷೆಯಾದರೂ ಸಹ, ನಮ್ಮ ಮಾತೃ ಭಾಷೆಗಳನ್ನು ಮರೆಯಬಾರದು. ಕನ್ನಡ ಭಾಷೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಹೆಚ್ಚಿನ ಸಹಕಾರ ನೀಡುತ್ತಿದೆ ಎಂದು ಹೇಳಿದರು.
ಮೈಸೂರಿನ ಮಹಾರಾಣಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಡಿ.ರವಿ ಮಾತನಾಡಿ, ರಾಷ್ಟ್ರದಲ್ಲಿ ಗುರುತಿಸುವಂತಹ ಪುಣ್ಯಭೂಮಿ ಕೊಡಗು. ಕಾವೇರಿ ಮಾತೆಯನ್ನು ನಾವು ಸದಾ ಪೂಜಿಸಬೇಕು. ಇಂದಿಗೂ ಸಹ ಗ್ರಾಮೀಣ ಹಾಗೂ ಬುಡಕಟ್ಟು ಜನರು ವಾಸಿಸುವ ಪ್ರದೇಶದಲ್ಲಿ ಕನ್ನಡ ಭಾಷೆ ಉಳಿದಿದೆ ಎಂದರೆ ತಪ್ಪಾಗಲಾರದು. ಕನ್ನಡವು ಸಮಸ್ತ ನಾಡಿನ ಭಾಷೆಯಾಗಿದೆ. ಪಂಪ, ರನ್ನ, ಪೊನ್ನ, ಹೀಗೆ ಹಲವರು ಕನ್ನಡ ಭಾಷೆ ಬೆಳವಣಿಗೆಗೆ ಶ್ರಮಿಸಿದ್ದಾರೆ ಎಂದು ಹೇಳಿದರು.
ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ರಾಣಿ ಮಾಚಯ್ಯ ಸನ್ಮಾನ ಸ್ವೀಕರಿಸಿ ಮಾತನಾಡಿ, ೧೦ ಸಾವಿರ ಮಕ್ಕಳಿಗೆ ಕೊಡವ ಸಾಂಪ್ರದಾಯಿಕ ಉಮ್ಮತ್ತಾಟ್ ಕಲಿಸಲು ಪ್ರಯತ್ನಿಸಲಾಗಿದೆ. ನನಗೆ ಸಿಕ್ಕಿರುವ ಪದ್ಮಶ್ರೀ ಪ್ರಶಸ್ತಿಯು ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ದೊರೆತಂತೆ ಎಂದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಮಾತನಾಡಿ, ಪ್ರತಿಯೊಬ್ಬರೂ ಕನ್ನಡದಲ್ಲಿ ಮಾತನಾಡಬೇಕು. ಕನ್ನಡದಲ್ಲಿ ಬರೆಯಬೇಕು. ಕನ್ನಡ ಭಾಷೆ ಬಗ್ಗೆ ಪ್ರೀತಿ, ಅಭಿಮಾನ ಇರಬೇಕು. ಕನ್ನಡ ಕೆಲಸಗಳಿಗೆ ಸದಾ ಬೆಂಬಲವಿರುತ್ತದೆ ಎಂದರು.
ಮಡಿಕೇರಿ ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ, ಸಾಹಿತಿ ಕಿಗ್ಗಾಲು ಗಿರೀಶ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಕೇಶವ ಕಾಮತ್, ಬೆಟ್ಟಗೇರಿ ಗ್ರಾ.ಪಂ.ಅಧ್ಯಕ್ಷರಾದ ನಾಪಂಡ ರ‌್ಯಾಲಿ ಮಾದಯ್ಯ, ಸಾಹಿತಿ ಬಾಚರಣಿಯಂಡ ಕೆ.ಅಪ್ಪಣ್ಣ, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನವೀನ್ ಅಂಬೆಕಲ್ಲು, ಬೆಟ್ಟಗೇರಿ ಉದಯ ವಿದ್ಯಾಸಂಸ್ಥೆಯ ಅಧ್ಯಕ್ಷ ತಳೂರು ಕಿಶೋರ್ ಕುಮಾರ್, ಮಡಿಕೇರಿ ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷರಾದ ಕುಡೆಕಲ್ ಸಂತೋಷ್, ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಮುನೀರ್ ಅಹಮ್ಮದ್, ರೇವತಿ ರಮೇಶ್, ಕಸಾಪ ತಾಲೂಕು ಅಧ್ಯಕ್ಷರು ಇತರರು ಇದ್ದರು.