ಇಂಡಿ ಪಟ್ಟಣಕ್ಕೆ ಎಸಿ ಭೇಟಿ

AC visit to Ind town
ಇಂಡಿ ಪಟ್ಟಣಕ್ಕೆ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಭೇಟಿ ನೀಡಿ ಗಣೇಶ ಉತ್ಸವ ಸಮಿತಿ ಪದಾಧಿಕಾರಿಗಳ ಜತೆ ಚರ್ಚಿಸಿದರು. ಮಹಾಂತೇಶ ಹಂಗರಗಿ, ಎಲ್.ಎಸ್.ಸೋಮನಾಯಕ ಇತರರಿದ್ದರು.
Published on

ಇಂಡಿ: ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಪಟ್ಟಣದ ವಿವಿಧ ಬಡಾವಣೆಗಳಿಗೆ ಮಂಗಳವಾರ ಭೇಟಿ ನೀಡಿ ಗಣೇಶ ಉತ್ಸವ ಸಮಿತಿಯ ಪದಾಧಿಕಾರಿಗಳ ಜತೆ ಸಮಾಲೋಚಿಸಿ ಪಿಒಪಿ ಗಣೇಶ ಮೂರ್ತಿಗಳ ಬದಲಾಗಿ ಮಣ್ಣಿನ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸಲು ಮನವಿ ಮಾಡಿದರು.

ಸಾಮೂಹಿಕವಾಗಿ ಗಣೇಶ ವಿಸರ್ಜನೆ ಮಾಡುವ ಸ್ಥಳಕ್ಕೆ ಭೇಟಿ ನೀಡಿ ಸಮರ್ಪಕ ವಿದ್ಯುತ್ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಂತರ ಪಟ್ಟಣದ ಮೆಗಾ ಮಾರ್ಕೆಟ್ ಕಾಮಗಾರಿ ಪರಿಶೀಲಿಸಿದರು. ಬಿಎಸ್‌ಎನ್‌ಎಲ್ ಕಚೇರಿ ಸಮೀಪದ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ಸಾರ್ವಜನಿಕರ ಕುಂದು-ಕೊರತೆಗಳ ಬಗ್ಗೆ ಚರ್ಚಿಸಿದರು.

ಕೇಂದ್ರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಅಲ್ಲಿನ ವಿವಿಧ ವ್ಯವಸ್ಥೆಗಳನ್ನು ಖುದ್ದಾಗಿ ಪರಿಶೀಲಿಸಿದರು. ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳುವ ಬಸ್‌ಗಳನ್ನು ಪಕ್ಕದ ಹಳೆಯ ಡಿಪೋ ಸ್ಥಳದಲ್ಲಿ ನಿಲ್ಲಿಸಿ, ಅಲ್ಲಿಂದ ಹೋಗಿಬರುವ ವ್ಯವಸ್ಥೆ ಕಲ್ಪಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಸ್ ನಿಲ್ದಾಣ ಹಾಗೂ ಶೌಚಗೃಹಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಡಿಪೋ ಮ್ಯಾನೇಜರ್ ಎಸ್.ಬಿ.ಬಿರಾದಾರ ಅವರಿಗೆ ಕಟ್ಟುನಿಟ್ಟಾಗಿ ತಾಕೀತು ಮಾಡಿದರು.

ಸಂಚಾರ ದಟ್ಟಣೆ ತಡೆಗಟ್ಟಲು ಬಸವೇಶ್ವರ ವೃತ್ತದಲ್ಲಿ ಇರುವ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ ಪುನರ್ ಆರಂಭಿಸಲು ಅಧಿಕಾರಿಗಳಿಗೆ ಸಲಹೆ ನೀಡಿದರು.

ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ, ಆರೋಗ್ಯಾಧಿಕಾರಿ ಎಲ್.ಎಸ್.ಸೋಮನಾಯಕ, ಸಿಪಿಐ ರತನಕುಮಾರ ಜೀರಗಾಳ, ಸಾರಿಗೆ ಡಿಪೋ ಮ್ಯಾನೇಜರ್ ಎಸ್.ಬಿ.ಬಿರಾದಾರ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net