ಶನಿವಾರದಿಂದ ಮನೆಯಲ್ಲಿ ಮತದಾನಕ್ಕೆ ಚಾಲನೆ - ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ ಅವಕಾಶ

20240411_114514
Published on

ಪುತ್ತೂರು: ಹಿರಿಯ ನಾಗರಿಕರಿಗೆ ಹಾಗೂ ಅಂಗವಿಕಲರಿಗೆ ಮನೆಯಲ್ಲಿ ಮತ ಚಲಾಯಿಸಲು ಅವಕಾಶಗಳನ್ನು ಆಯೋಗ ಕಲ್ಪಿಸಿದ್ದು, ಏ.೧೪ರಿಂದ ೧೬ರವರೆಗೆ ಬ್ಯಾಲೆಟ್ ಪೇಪರ್ ಮೂಲಕ ಒಟ್ಟು ೨೦ ರೂಟ್‌ಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ೮೫ ವರ್ಷ ಮೇಲ್ಪಟ್ಟ ಹಿರಿಯರು ೭೮೭ ಮಂದಿ ಮತ್ತು ೩೪೦ ಅಂಗವಿಕಲರು ಅರ್ಹತೆ ಹೊಂದಿದ್ದಾರೆ ಎಂದು ಸಹಾಯಕ ಚುನಾವಣಾಽಕಾರಿ ಜುಬಿನ್ ಮೊಹಾಪಾತ್ರ ಹೇಳಿದರು.

ಮನೆ ಮತದಾನ ಪ್ರಕ್ರಿಯೆಯು ನೋಡೆಲ್ ಅಧಿಕಾರಿಯಾಗಿರುವ ಕ್ಷೇತ್ರ ಶಿಕ್ಷಣಾಽಕಾರಿಯವರ ನೇತೃತ್ವದಲ್ಲಿ ನಡೆಯಲಿದ್ದು, ಅರ್ಹ ಮತದಾರರನ್ನು ಸಂಪರ್ಕಿಸುವ ಕಾರ್ಯ ಈಗಾಗಲೇ ಮಾಡಲಾಗಿದೆ. ಪಿ.ಆರ್.ಒ, ಕ್ಯಾಮರಾಮ್ಯಾನ್, ಪೊಲೀಸರು, ಮೈಕ್ರೋ ಅಬ್ಸರ್ವರ್ ಭೇಟಿ ನೀಡಲಿದ್ದಾರೆ. ಮನೆಗೆ ತೆರಳುವ ತಂಡಕ್ಕೆ ಮತದಾನ ಪ್ರಕ್ರಿಯೆ ಕುರಿತು ವಿವೇಕಾನಂದ ಶಾಲೆಯಲ್ಲಿ ತರಬೇತಿ ನಡೆಯುತ್ತಿದೆ. ಬ್ಯಾಲೆಟ್ ಪೇಪರ್ ಮೂಲಕ ಮತದಾನ ನಡೆಯಲಿದೆ. ಬೆಳಗ್ಗೆ ೮ ರಿಂದ ಸಂಜೆ ೬ ಗಂಟೆಯ ಅವಽಯಲ್ಲಿ ಈ ಮತದಾನ ಪ್ರಕ್ರಿಯೆ ನಡೆಯಲಿದೆ. ಸೆಕ್ಟರ್ ೧೬ರ ಒಳಮೊಗ್ರು, ಕುರಿಯ, ಅರಿಯಡ್ಕ ಭಾಗದಲ್ಲಿ ಅತಿ ಹೆಚ್ಚು (೮೫ ಮಂದಿ) ಮತದಾರರಿದ್ದರೆ, ಸೆಕ್ಟರ್ ೧ರ ವಿಟ್ಲ ಭಾಗದಲ್ಲಿ ಅತಿ ಕಡಿಮೆ(೩೫ ಮಂದಿ) ಮತದಾರರಿದ್ದಾರೆ. ಹಿರಿಯ ನಾಗರಿಕರ ವಿಭಾಗದಲ್ಲಿ ೧೦೦ ವರ್ಷಕ್ಕಿಂತ ಮೇಲ್ಪಟ್ಟವರು ೧೬ ಮಂದಿ ಇದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಚುನಾವಣೆಗೆ ಸಂಬಂಽಸಿ ಪುತ್ತೂರಿನಿಂದ ಅಗತ್ಯ ಸೇವೆಯ ಕರ್ತವ್ಯದಲ್ಲಿರುವ ೩೪ ಮಂದಿ ಸಿಬ್ಬಂದಿಗೆ ಪೋಸ್ಟಲ್ ಓಟರ್ ಸೆಂಟರ್ (ಪಿವಿಸಿ)ನಲ್ಲಿ ಮತದಾನ ಪ್ರಕ್ರಿಯೆ ಮಾಡಲಾಗುವುದು. ಜಿಲ್ಲಾ ಚುನಾವಣಾಧಿಕಾರಿಗಳ ಕೊಠಡಿ ಸಂಖ್ಯೆ ೩೦೩ಯಲ್ಲಿ  ೧೯ ರಿಂದ ೨೧ರ ಒಳಗೆ ಹೋಗಿ ಮತದಾನ ಮಾಡಲು ಅವಕಾಶವಿದೆ. ಚುನಾವಣಾ ಕರ್ತವ್ಯದಲ್ಲಿರುವವರಿಗೆ ಪುತ್ತೂರಿನಲ್ಲಿ ಮತದಾನ ಹಕ್ಕು ಇದ್ದರೆ ಅವರಿಗೆ ಫಾರ್ಮ್ ೧೨ ಮೂಲಕ ಯಾವುದೇ ಮತಗಟ್ಟೆಗೆ ಹೋಗಿ ಅಲ್ಲಿ ಪ್ರಮಾಣಪತ್ರ ತೋರಿಸಿ ಮತದಾನ ಮಾಡಬಹುದು. ಬೇರೆ ಜಿಲ್ಲೆಯಿಂದ ಬಂದವರಿಗೆ ಫಾರ್ಮ್ ೧೨ಎ ಪೋಸ್ಟಲ್ ಮತದಾನ ಪಕ್ರಿಯೆ ನಡೆಯಲಿದೆ. ಈ ಮತದಾನ ಪ್ರಕ್ರಿಯೆ ೧೫ರ ಒಳಗೆ ಮುಗಿಸಬೇಕಾಗಿದೆ. ಹಾಗಾಗಿ ೧೩ರ ಒಳಗೆ ಚುನಾವಣಾ ಕರ್ತವ್ಯದಲ್ಲಿರುವವರು ಎಲ್ಲ ಫಾರ್ಮ್ ೧೨ ಮತ್ತು ೧೨ಎ ಅನ್ನು ತಹಸೀಲ್ದಾರ್ ಕಚೇರಿಗೆ ನೀಡಬೇಕು ಎಂದರು.

ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ೧,೦೬,೪೧೮ ಪುರುಷರು, ೧,೧೦,೨೫೭ ಮಹಿಳಾ ಮತದಾರರು ಸೇರಿ ಒಟ್ಟು ೨,೧೬,೬೭೫ ಇದ್ದಾರೆ. ೮೬ ಮತ್ತು ೮೭(ಪೆರುವಾಯಿ ಕೊಲ್ಲತ್ತಡ್ಕ ಶಾಲೆ) ಮತಗಟ್ಟೆ ಮತ್ತು ೧೬೭(ದೂಮಡ್ಕ ಶಾಲೆ) ನೆಟ್‌ವರ್ಕ್ ಸಮಸ್ಯೆ ಇರುವ ಕೇಂದ್ರವಾಗಿದ್ದು, ಬಿಎಸ್‌ಎನ್‌ಎಲ್ ಮೂಲಕ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ ನಿರಂತರ ನಡೆಸಲಾಗುತ್ತಿದ್ದು, ತಾಲೂಕು ಆಡಳಿತ ಸೌಧದಲ್ಲೂ ಒಂದು ಸೆಲಿ ಕಾರ್ನರ್ ಮಾಡಲಾಗಿದೆ ಎಂದರು.

ತಹಸೀಲ್ದಾರ್ ಕುಞ ಅಹಮ್ಮದ್, ಸ್ವೀಪ್ ನೋಡೆಲ್ ಅಧಿಕಾರಿ ಹನಮ ರೆಡ್ಡಿ, ಅಂಚೆ ಮತದಾನದ ನೋಡೆಲ್ ಅಧಿಕಾರಿ ಲೋಕೇಶ್ ಎಸ್.ಆರ್, ಹಿರಿಯ ನೋಡಲ್ ಅಧಿಕಾರಿ ಶಿವಶಂಕರ್ ದಾನಗೊಂಡ, ಉಪ ತಹಶೀಲ್ದಾರ್ ಸುಲೋಚನಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net