

ಅರಕೇರಾ: ಅರಕೇರಾ ತಾಲೂಕು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುವುದಕ್ಕೆ ತಾಲೂಕು, ಜಿಲ್ಲಾಡಳಿತದಿಂದ ಸಕಲ ಸಿದ್ಧತೆಗಳು ನಡೆದಿವೆ. ಆಡಳಿತಾತ್ಮಕವಾಗಿ ಸರ್ಕಾರದ ಮಟ್ಟದಲ್ಲಿ ನಿರಂತರ ಪ್ರಕ್ರಿಯೆ ನಡೆದಿವೆ ಎಂದು ಎಸಿ ಗಜಾನನ ಬಾಲೆ ಹೇಳಿದರು.
ಪಟ್ಟಣದ ತಹಸಿಲ್ ಕಚೇರಿಗೆ ಭೇಟಿ ನೀಡಿದ ನಂತರ ಸುದ್ದಿಗಾರರಿಗೆ ಗುರುವಾರ ಮಾತನಾಡಿದರು. ಅರಕೇರಾ ಹೊಸ ತಾಲೂಕು ಆಗಿರುವುದರಿಂದ ಭೂಮಿ ಕೇಂದ್ರ ರಚನೆಗಾಗಿ ಹೋಬಳಿವಾರು ಗ್ರಾಮಗಳ ಸೇರ್ಪಡೆಗೆ ಈಗಾಗಲೇ ಜಿಲ್ಲಾ, ತಾಲೂಕು ಆಡಳಿತ ಕ್ರಮವಹಿಸಿದೆ. ಭೂಮಿ ಕೇಂದ್ರ ವಿಭಾಗದ ನಂತರ ಡಿಡಿಒ ಕೋಡ್ ರಚನೆಯಾಗಲಿದೆ. ತಾಲೂಕಿಗೆ ಸೇರ್ಪಡೆಯಾದ ಗ್ರಾಮಗಳಿಗೆ ಸಂಬಂಧಿಸಿದ ಗ್ರಾಮ ಆಡಳಿತಾಧಿಕಾರಿಗಳು ಸೇರಿದಂತೆ ಪೂರ್ಣ ಪ್ರಮಾಣದ ಸಿಬ್ಬಂದಿ ಮುಂದಿನ ದಿನಗಳಲ್ಲಿ ಅರಕೇರಾದಲ್ಲಿಯೇ ಕಾರ್ಯನಿರ್ವಹಿಸಲಿದ್ದಾರೆ ಎಂದರು.
ತಹಸಿಲ್ ಕಚೇರಿ ತಾತ್ಕಾಲಿಕ ಸ್ಥಳಾಂತರಕ್ಕೆ ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ವಸತಿ ನಿಲಯದ ಕಟ್ಟಡವನ್ನು ಗುರುತಿಸಲಾಗಿದೆ. ದೇವದುರ್ಗದಲ್ಲಿ ನಡೆಯುತ್ತಿದ್ದ ನೋಂದಣಿ ಮತ್ತು ಮುಂದ್ರಾಂಕ ಇಲಾಖೆ ಸೇವೆಗಳು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ. ಅರಕೇರಾದಲ್ಲಿಯೇ ಸೇವೆ ಪ್ರಾರಂಭಿಸಲು ಸಕಲ ಸಿದ್ಧತೆಗಳು ನಡೆದಿವೆ ಎಂದು ಎಸಿ ಗಜಾನನ ಬಾಲೆ ಮಾಹಿತಿ ನೀಡಿದರು.
ಬಳಿಕ ತಹಸಿಲ್ ಕಚೇರಿ ಸ್ಥಳಾಂತರಕ್ಕಾಗಿ ಸರ್ಕಾರಿ ಪಾಲಿಟೆಕ್ನಿಕ್ ವಸತಿ ನಿಲಯ ಪರಿಶೀಲಿಸಿದರು. ಪಾಲಿಟೆಕ್ನಿಕ್ ಕಾಲೇಜಿಗೆ ಭೇಟಿ ನೀಡಿ ಮಂಜೂರಾದ ಬ್ರಾಂಚ್‌ಗಳ ಮಾಹಿತಿ ಪಡೆದರು. ವರ್ಕ್‌ಶಾಪ್ ಪರಿಶೀಲಿಸಿದರು. ನಿಗದಿತ ಸೀಟುಗಳ ಭರ್ತಿಗೆ ಕಾಲೇಜು ಸಿಬ್ಬಂದಿ ಹೆಚ್ಚಿನ ಶ್ರಮವಹಿಸಬೇಕು ಎಂದು ಸಲಹೆ ನೀಡಿದರು.