

ಸಾಗರ: ತಮ್ಮ ಕಚೇರಿಯ ಗುಮಾಸ್ತ ನಿವೃತ್ತಿಯಾದ ಹಿನ್ನೆಲೆಯಲ್ಲಿ ಸಾಗರ ಉಪವಿಭಾಗಾಧಿಕಾರಿ ವಿಶೇಷ ಗೌರವದೊಂದಿಗೆ ಸೋಮವಾರ ಆತನಿಗೆ ಬೀಳ್ಕೊಡುಗೆ ನೀಡಿದರು. ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ ಅವರು ನಿವೃತ್ತಿಯಾದ ಗುಮಾಸ್ತ ಕೃಷ್ಣಪ್ಪ ಅವರನ್ನು ತಮ್ಮ ಸರ್ಕಾರಿ ವಾಹನದಲ್ಲಿ ಕೂರಿಸಿಕೊಂಡು ಹೋಗಿ ಮನೆಗೆ ಡ್ರಾಪ್ ಮಾಡುವ ಮೂಲಕ ಹೃದಯಸ್ಪರ್ಶಿ ಬೀಳ್ಕೊಡುಗೆ ಕೊಟ್ಟರು. ಸಾಗರ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸಿದ ಕೃಷ್ಣಪ್ಪ ಅವರು ಸೋಮವಾರ ವಯೋನಿವೃತ್ತಿ ಹೊಂದಿದರು. ಈ ಹಿನ್ನೆಲೆಯಲ್ಲಿ ಪಲ್ಲವಿ ಅವರು ಸರ್ಕಾರಿ ವಾಹನದಲ್ಲಿ ಕೃಷ್ಣಪ್ಪ ಅವರನ್ನು ಮುಂದೆ ಕೂರಿಸಿಕೊಂಡು ತಾವು ಹಿಂದಿನ ಸೀಟಿನಲ್ಲಿ ಕುಳಿತು ಮನೆಗೆ ಕರೆದುಕೊಂಡು ಹೋಗಿ ಬಿಟ್ಟು ಬಂದರು. ಗುಮಾಸ್ತ ಮತ್ತು ಅಧಿಕಾರಿ ಎನ್ನುವ ಬೇಧ ತೋರದ ಅಧಿಕಾರಿಗಳ ಕಾರ್ಯ ಮಾದರಿಯಾಯಿತು. ಈ ಬಗ್ಗೆ ‘ವಿಜಯವಾಣಿ’ ಜತೆ ಮಾತನಾಡಿದ ಕೃಷ್ಣಪ್ಪ, ನಾವು ಸಾಗರ ತಾಲೂಕಿನ ಶಿರವಂತೆಯವರು. 40 ವರ್ಷಗಳ ಕಾಲ ನನ್ನ ಸಂಪೂರ್ಣ ಸೇವೆಯನ್ನು ಸಾಗರದಲ್ಲಿ ಪೂರೈಸಿದ್ದೇನೆ. ಮುಕ್ಕಾಲು ಎಕರೆ ಗದ್ದೆ ಇದ್ದು ಭತ್ತ ಬೆಳೆಯುತ್ತೇವೆ. ಉಪವಿಭಾಗಾಧಿಕಾರಿಗಳೇ ತಮ್ಮ ಕಾರಿನಲ್ಲಿ ನನ್ನನ್ನು ಮುಂದೆ ಕೂರಿಸಿ ಮನೆವರೆಗೂ ತಂದು ಬಿಟ್ಟು ಸೌಜನ್ಯವನ್ನು ಮೆರೆದಿದ್ದಾರೆ. ನನ್ನ ಪ್ರಾಮಾಣಿಕ ಸೇವೆಗೆ ಸಿಕ್ಕ ದೊಡ್ಡ ಭಾಗ್ಯ ಎಂದುಕೊಂಡಿದ್ದೇನೆ. ಈ ಅಪರೂಪದ ದೃಶ್ಯವನ್ನು ನಮ್ಮ ಊರಿನವರು, ಕುಟುಂಬದವರು ಕಣ್ಣು ತುಂಬಿಕೊಂಡರು. ನನ್ನ ಜೀವಮಾನದಲ್ಲಿ ಮರೆಯಲಾಗದ ಅಪರೂಪದ ಘಟನೆ ಇದು ಎಂದು ಸಂತಸ ವ್ಯಕ್ತಪಡಿಸಿದರು.