

ಹುಬ್ಬಳ್ಳಿ : ಉಡುಪಿ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣದ ತನಿಖೆಯನ್ನು ಯಾವುದೇ ಒತ್ತಡ ಇಲ್ಲದೇ ನಡೆಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಹುಬ್ಬಳ್ಳಿಯಲ್ಲಿ ಶನಿವಾರದಂದು ತಹಸೀಲ್ದಾರರ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಹಿಂದು ವಿದ್ಯಾರ್ಥಿನಿಯರು ಶೌಚಾಲಯ ಬಳಸುವ ವೀಡಿಯೋವನ್ನು ಚಿತ್ರೀಕರಿಸಿದ ಅನ್ಯಕೋಮಿನ ವಿದ್ಯಾರ್ಥಿನಿಯರ ಕಾರ್ಯ ವಿಕೃತವಾಗಿದೆ. ಪ್ರಾಮಾಣಿಕ ತನಿಖೆ ನಡೆಸಬೇಕಿದ್ದ ಪೊಲೀಸರು ಒತ್ತಡಕ್ಕೆ ಮಣಿದಿದ್ದಾರೆ ಎಂದು ಪರಿಷತ್ ಕಾರ್ಯಕರ್ತರು ದೂರಿದರು.
ಈ ಘಟನೆಯ ಹಿಂದೆ ಜಿಹಾದಿಗಳ ಕೈವಾಡವಿರುವ ಶಂಕೆ ಇದೆ. ಈ ರೀತಿಯ ವಿಡಿಯೋಗಳನ್ನು ಚಿತ್ರೀಕರಿಸಿ, ಹೆಣ್ಣು ಮಕ್ಕಳನ್ನು ಲವ್ ಜಿಹಾದ್ ನಂತಹ ಕೂಪಕ್ಕೆ ತಳ್ಳುವ ಷಡ್ಯಂತ್ರಗಳು ಇರುವ ಸಾಧ್ಯತೆ ಇದೆ. ಕೇರಳ ಸ್ಟೋರಿಯಂತೆ ಘಟನೆಗಳು ಉಡುಪಿಯಲ್ಲಿ ನಡೆಯುತ್ತಿರುವ ಸಂಶಯ ಬಲವಾಗಿ ವ್ಯಕ್ತವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯದೇ ಪ್ರಾಮಾಣಿಕ ತನಿಖೆ ನಡೆಸಬೇಕು. ಸರ್ಕಾರವು ಈ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡದೇ, ಸತ್ಯವನ್ನು ಹೊರತರುವ ಕೆಲಸ ಮಾಡಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡಬೇಕು ಹಾಗೂ ಈ ರೀತಿಯ ಘಟನೆ ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪರಿಷತ್ ನಗರ ಕಾರ್ಯದರ್ಶಿ ಸುಶೀಲ ಇಟಗಿ, ಮನೋಜ್, ನವೀನ್, ಭರತ್, ಸುಷ್ಮಾ, ಶಶಾಂಕ ಹಾಗೂ ಇತರರು ಹಾಜರಿದ್ದರು.