

ಕಲಬುರಗಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸುವ ಕೆ-ಸೆಟ್ ಪರೀಕ್ಷಾ ಕೇಂದ್ರವನ್ನು ಕಲಬುರಗಿಯಿಂದ ವರ್ಗಾವಣೆ ಮಾಡಿರುವುದು ಖಂಡಿಸಿ ಶುಕ್ರವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೃಹತ್ ಪ್ರತಿಭಟನೆ ನಡೆಸಿತು.
ನಗರದ ಎನ್.ವಿ.ಮೈದಾನದಿಂದ ಜಗತ್ ವೃತ್ತದವರೆಗೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.
ನಂತರ ಏರ್ಪಡಿಸಿದ್ದ ಸಮಾವೇಶದಲ್ಲಿ ಎಬಿವಿಪಿ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಮಾತನಾಡಿ, ಹಿಂದೆ ಅರ್ಹತಾ ಪರೀಕ್ಷೆಗೆ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಸ್ಥಾಪಿಸಲಾಗುತ್ತಿತ್ತು. ಸಾವಿರಾರು ಆಕಾಂಕ್ಷಿಗಳಿAದ ತಮ್ಮ ಜಿಲ್ಲೆಯಲ್ಲೇ ಪರೀಕ್ಷೆ ಬರೆಯಲು ಅನುಕೂಲವಾಗುತ್ತಿತ್ತು. ಆದರೆ ಪ್ರಸ್ತುತ ಕೆಇಎ ಪರೀಕ್ಷಾ ಕೇಂದ್ರ ಸಂಖ್ಯೆ ಕಡಿತಗೊಳಿಸಿ, ಬೆಂಗಳೂರು ಮಾತ್ರ ಪರೀಕ್ಷಾ ಕೇಂದ್ರ ಮಾಡಿದ್ದು, ಅವೈಜ್ಞಾನಿಕ ನಿರ್ಧಾರವಾಗಿದೆ ಎಂದು ಖಂಡಿಸಿದರು.
18 ವಿಷಯಕ್ಕೆ ಮೊದಲು ನಿಗದಿಪಡಿಸಿದ್ದ ಕೇಂದ್ರಗಳಲ್ಲಿ ಕಲಬುರಗಿ ಮತ್ತು ವಿಜಯಪುರ ಜಿಲ್ಲಾ ಕೇಂದ್ರ ಒಳಗೊಂಡಿದ್ದವು. ಈಗ ಕೇಂದ್ರ ರದ್ದು ಮಾಡಿ ಕಲಬುರಗಿಯ ಕೇಂದ್ರ ಬೆಂಗಳೂರಿಗೆ ಮತ್ತು ವಿಜಯಪುರ ಕೇಂದ್ರವನ್ನು ತುಮಕೂರಿಗೆ ಬದಲಾಯಿಸಿದೆ. ಇದರಿಂದ ಸಾವಿರಾರು ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಕೇಂದ್ರಿಕರಣ ಪ್ರಕಾರ ಹೆಚ್ಚು ಕಡೆ ಪರೀಕ್ಷೆ ನಡೆಸಿ ಹಲವು ಜನರಿಗೆ ಅನುಕೂಲ ಮಾಡಿಕೊಡಬೇಕಿತ್ತು. ಅಕ್ರಮ ತಡೆಯಲಾಗದ ಸರ್ಕಾರದ ವೈಫಲ್ಯಕ್ಕೆ ಈ ಭಾಗದ ಬಡಪಾಯಿಗಳು ಬೆಲೆ ತೆರಬೇಕಾಗಿದೆ. ಈ ಭಾಗದ ಆಕಾಂಕ್ಷಿಗಳು ಭವಿಷ್ಯದಲ್ಲಿ ಪ್ರತಿ ಪರೀಕ್ಷೆಗೆ ಬೆಂಗಳೂರಿಗೆ ಹೋಗಬೇಕಾಗಬಹುದು. ಈ ಭಾಗದ ಅಭ್ಯರ್ಥಿಗಳಿವೆ ಅನ್ಯಾಯವಾಗದಂತೆ ತಡೆಯಲು ಕಾರ್ಯ ಪ್ರವೃತ್ತವಾಗಿ ಮೊದಲಿನಂತೆ ಪರೀಕ್ಷೆ ನಡೆಸುವಂತೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸಮಾವೇಶದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಪೃಥ್ವಿಕುಮಾರ, ಗಂಗಾಧರ ಹಂಜಿ, ಭಾಗ್ಯಶ್ರೀ ಬೆಳ್ಳೆ, ಹಣಮಂತ ಬಗಲಿ, ಶಶಿಕಾಂತ, ದಿಲೀಪ, ಶಾಂತಕುಮಾರ, ಅಲ್ಲಮಪ್ರಭು ಗುಡ್ಡಾ, ಕೈಲಾಸ ಪಾಟೀಲ್ ಇತರರಿದ್ದರು.