

ಔರಾದ್: ಜಂಬಗಿಯ ಸರ್ಕಾರಿ ಪ್ರೌಢ ಶಾಲೆಯ ಆರು ಶಿಕ್ಷಕರಲ್ಲಿ ಐವರನ್ನು ಏಕಾಏಕಿ ವರ್ಗಾವಣೆ ಮಾಡಿರುವ ಶಿಕ್ಷಣ ಇಲಾಖೆ ಕ್ರಮ ಸರಿಯಲ್ಲ. ಇದರಿಂದ ಗ್ರಾಮದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಕೂಡಲೇ ಶಿಕ್ಷಕರನ್ನು ನೇಮಕ ಮಾಡಬೇಕು ಎಂದು ಎಬಿವಿಪಿ ಪ್ರಮುಖ ಅಶೋಕ ಶೆಂಬೆಳ್ಳಿ ಆಗ್ರಹಿಸಿದರು.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂದೆ ಶನಿವಾರ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾತನಾಡಿ, ಒಂದು ತಿಂಗಳಿಂದ ಶಿಕ್ಷಕರಿಲ್ಲದೇ ವಿದ್ಯಾರ್ಥಿಗಳು ಬೋಧನೆಯಿಂದ ವಂಚಿತರಾಗುತ್ತಿದ್ದಾರೆ. ವಿದ್ಯಾರ್ಥಿಗಳು ಶಿಕ್ಷಣ ಪಡೆಯುವುದು ಹಕ್ಕಾಗಿದೆ. ಇಲ್ಲಿ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಲೆಯಲ್ಲಿ ೧೫೫ ವಿದ್ಯಾರ್ಥಿಗಳಿದ್ದು, ಆರು ಶಿಕ್ಷಕರಿದ್ದರು. ಆದರೆ ಏಕಕಾಲಕ್ಕೆ ಐವರನ್ನು ವರ್ಗಾವಣೆ ಮಾಡಿದ್ದಾರೆ. ಒಂದು ತಿಂಗಳಿಂದ ಬೋಧನೆ ಇಲ್ಲದೇ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪರಿಣಾಮ ಬೀರಿದೆ. ಅರ್ಧವಾರ್ಷಿಕ ಪರೀಕ್ಷೆ ಎದುರಾಗುವ ವೇಳೆಯಲ್ಲಿಯೇ ಶಿಕ್ಷಕರಿಲ್ಲದೇ ವಿದ್ಯಾರ್ಥಿಗಳನ್ನು ಸಂಕಷ್ಟಕ್ಕೆ ಸಿಲುಕಿದಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಶಿಕ್ಷಕರನ್ನು ನೇಮಿಸಿ, ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಮನವಿ ಪತ್ರ ಸಲ್ಲಿಸಿದರು. ಜಿಲ್ಲಾ ಸಂಚಾಲಕ ಶಶಿಕಾಂತ ರಾಕಲೆ, ಪ್ರಮುಖರಾದ ಅಜಯ, ರಾಹುಲ್, ಅನೀಲ, ಲಕ್ಷ್ಮಣ, ಮಾರುತಿ, ನಿತಿನ್ ಮೂಲಗೆ, ನವನಾಥ ಕೋಳಿ, ಖಂಡೋಬಾ, ಸಂದೀಪ, ಹಾವಪ್ಪ, ಅಂಬಾದಾಸ್, ಮಲ್ಲಿಕಾರ್ಜುನ ಟೆಕರಾಜ್, ಅನೀಲ ಮೇತ್ರಿ ಇತರರಿದ್ದರು.