

ಕಲಬುರಗಿ: ನಗರದ ಪಿಡಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ಡಿ.೨೭,೨೮ ಮತ್ತು ೨೯ರಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಉತ್ತರ ಪ್ರಾಂತದ 44ನೇ ರಾಜ್ಯ ಮಟ್ಟದ ಸಮ್ಮೇಳನ ನಡೆಯಲಿದೆ ಎಂದು ಎಬಿವಿಪಿ ಉತ್ತರ ಪ್ರಾಂತ ಕಾರ್ಯದರ್ಶಿ ಸಚಿನ ಕುಳಗೇರಿ ತಿಳಿಸಿದರು.
ಡಿ.27ರ ಬೆಳಗ್ಗೆ 11ಕ್ಕೆ ಸಮ್ಮೇಳನವನ್ನು ಸಂಸದ, ಜಯದೇವ ಆಸ್ಪತ್ರೆ ಮಾಜಿ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಉದ್ಘಾಟಿಸಲಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನಾಡೋಜ ಮುನಿವೆಂಕಟಪ್ಪ ಹಾಗೂ ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ಶ್ರವಣಕುಮಾರ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಜೆ 5ಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೂರು ವರ್ಷ ಪಂಚ ಪರಿವರ್ತನೆ ವಿಷಯದ ಮೇಲೆ ಸಂಜೆ ೫ಕ್ಕೆ ವಿಶೇಷ ಭಾಷಣವನ್ನು ಆರ್‌ಎಸ್‌ಎಸ್ ಉತ್ತರ ಪ್ರಾಂತ ಪ್ರಚಾರಕ ಕೃಷ್ಣ ಜೋಶಿ ನಡೆಸಿಕೊಡಲಿದ್ದಾರೆ. ಡಿ.೨೮ರಂದು ಬೆಳಗ್ಗೆ 11ಕ್ಕೆ ಕ್ಯಾಂಪಸ್ ಕಾರ್ಯದ ಕುರಿತು ವಿಶೇಷ ಭಾಷಣವನ್ನು ಎಬಿವಿಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ನಡೆಸಿಕೊಡಲಿದ್ದಾರೆ. ಸಂಜೆ 4.30ಕ್ಕೆ ಪಿಡಿಎ ಇಂಜಿನಿಯರಿಂಗ್ ಕಾಲೇಜಿನಿಂದ ಶ್ರೀಶರಣಬಸವೇಶ್ವರ ದೇವಸ್ಥಾನದವರೆಗೆ ಶೋಭಾಯಾತ್ರೆ ನಡೆದು, ನಂತರ ಸಾರ್ವಜನಿಕ ಸಭೆ ನಡೆಯಲಿದೆ. ರಾಜ್ಯದ ವಿದ್ಯಾರ್ಥಿ ನಾಯಕರಿಂದ ಭಾಷಣ ಆಯೋಜಿಸಲಾಗಿದೆ ಎಂದರು.
ಡಿ.29ರಂದು ಬೆಳಗ್ಗೆ 9ಕ್ಕೆ ಸಂವಿಧಾನಕ್ಕೆ 75ವರ್ಷ ಹಿನ್ನಲೆ ವಿಶೇಷ ಭಾಷಣವನ್ನು ಕನ್ನಡ ಪ್ರಾಧ್ಯಾಪಕ ಡಾ.ಬಿ.ವಿ.ವಸಂತಕುಮಾರ ಹಾಗೂ ಸಾಮಾಜಿಕ ಕಾರ್ಯಕರ್ತ ವಾದಿರಾಜ ಭಾಷಣ ಮಾಡಲಿದ್ದಾರೆ. ಬೆಳಗ್ಗೆ 11ಕ್ಕೆ ಯುವ ಸಾಧಕರ ಹಾವೇರಿಯ ಪೊಲೀಸ್ ಇಲಾಖೆಯ ರಕ್ತ ಸೈನಿಕ ಕರಿಬಸಪ್ಪ ಎಂ. ಗೋಂದಿ ಅವರಿಗೆ ಸನ್ಮಾನ ಸಮಾರಂಭ ನಡೆಯಲಿದ್ದು, ಗುವಿವಿ ಕುಲಪತಿ ಪ್ರೊ.ದಯಾನಂದ ಅಗಸರ ಮುಖ್ಯ ಅತಿಥಿಯಾಗಿರಲಿದ್ದಾರೆ. ಸಂಜೆ ೪.೩೦ ಸಮಾರೋಪ ಸಮಾರಂಭ ನಡೆಯಲಿದೆ. ಸಮ್ಮೇಳನದಲ್ಲಿ ೧,೧೦೦ಕ್ಕೂ ಹೆಚ್ಚು ಅಪೇಕ್ಷಿತ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸ್ವಾಗತ ಸಮಿತಿ ಅಧ್ಯಕ್ಷ ಬಸವರಾಜ ದೇಶಮುಖ, ಸಂಯೋಜಕ ಅಲ್ಲಮಪ್ರಭು ಗುಡ್ಡಾ, ಕೋಶಾಧ್ಯಕ್ಷ ದಯಾಘನ ಧಾರವಾಡಕರ್, ಸೂರ್ಯಕಾಂತ ಇತರರಿದ್ದರು.
| ಸಚಿನ ಕುಳಗೇರಿ, ಉತ್ತರ ಪ್ರಾಂತ ಕಾರ್ಯದರ್ಶಿ. ಎಬಿವಿಪಿ