ಬಿವಿಬಿಗೆ ಚಿಗರಿ ನಿಲುಗಡೆ ಕಲ್ಪಿಸಲು ಎಬಿವಿಪಿ ಆಗ್ರಹ

Published on

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರ ಬಿವಿಬಿ ಕಾಲೇಜಿನ ಎದುರು 100 ಸಂಖ್ಯೆಯ ಚಿಗರಿ ಬಸ್ ಗಳನ್ನು ಸಹ ನಿಲ್ಲಿಸಲು ಕ್ರಮ ಕೈಗೊಳ್ಳಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಾಯವ್ಯ ಸಾರಿಗೆ ಸಂಸ್ಥೆಗೆ ಮನವಿ ಮಾಡಿದೆ.

ಬಿಆರ್ ಟಿಎಸ್ ಚಿಗರಿ ಬಸ್ ಗಳು ವಿದ್ಯಾರ್ಥಿಗಳ ಪಾಲಿಗೆ ವರದಾನವಾಗಿವೆ. ಆದರೆ, ಸಾಮಾನ್ಯ ಚಿಗರಿ ಬಸ್ ಗಳು ಮಾತ್ರ ಬಿವಿಬಿ ಎದುರು ನಿಲ್ಲುತ್ತವೆ. 100 ಸಂಖ್ಯೆಯ ಬಸ್ ಗಳು ನಿಲ್ಲುವುದಿಲ್ಲ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಬಸ್ಸಿನ ಲಭ್ಯತೆ ಇಲ್ಲದೆ, ಬಹಳಷ್ಟು ತೊಂದರೆ ಎದುರಿಸುತ್ತಿದ್ದಾರೆ.

ಬಿವಿಬಿ ಕ್ಯಾಂಪಸ್ ಒಂದರಲ್ಲೇ ಸುಮಾರು 15ರಿಂದ 18 ಸಾವಿರ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, ಇದರಲ್ಲಿ ಹೆಚ್ಚಿನವರು ಪ್ರಯಾಣಕ್ಕಾಗಿ ಬಿಆರ್ ಟಿಎಸ್ ಬಸ್ ಗಳನ್ನು ಅವಲಂಬಿಸಿದ್ದಾರೆ.

ಬಿವಿಬಿಗೆ ನಿಲುಗಡೆ ಇಲ್ಲದ ಕಾರಣ ವಿದ್ಯಾರ್ಥಿಗಳು ಕಿಮ್ಸ್ ನಿಲ್ದಾಣಕ್ಕೆ ಇಳಿದು ಬರಬೇಕು, ಇಲ್ಲವೇ ಬಸ್ ಬದಲಾವಣೆ ಮಾಡಬೇಕಾಗಿದೆ.
ವಿದ್ಯಾರ್ಥಿಗಳ ಸಮಯ ಹಾಗೂ ಹಣ ಎಲ್ಲವೂ ವ್ಯರ್ಥವಾಗುತ್ತಿದೆ. ಹಾಗಾಗಿ ಬಿವಿಬಿಯ ಎದುರುಗಡೆ 100 ಸಂಖೈಯ ಬಸ್ ಗಳನ್ನು ನಿಲ್ಲಿಸಬೇಕು ಎಂದು ವಿದ್ಯಾರ್ಥಿ ಪರಿಷತ್ ಹುಬ್ಬಳ್ಳಿ ಮಹಾನಗರ ಕಾರ್ಯದರ್ಶಿಗಳಾದ ದಾನೇಶ್ ಕಿತ್ತೂರ, ವಿಕ್ರಂ ಗಲಾಂಡೆ, ದರ್ಶನ ಹೆಗಡೆ, ಮನೋಜ್ ವಾಲ್ಮೀಕಿ, ಲಕ್ಷ್ಮಣ ಸುಜನ್ ಇತರರು ಮನವಿ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net