

ಸುಳ್ಯ: ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಹಾಗೂ ವಿಶ್ವವಿದ್ಯಾಲಯ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಇತರ ಶಿಕ್ಷಣ ಸಂಸ್ಥೆಗಳಲ್ಲಿ ಕಾಯಂ ಉಪನ್ಯಾಸಕರ ಸಮಸ್ಯೆ ಹಾಗೂ ಇತರ ಮೂಲಸೌಕರ್ಯದ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿ ಎಬಿವಿಪಿ ವತಿಯಿಂದ ಸುಳ್ಯ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ರಾಜ್ಯದ 460ಕ್ಕೂ ಹೆಚ್ಚಿನ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರ ಕೊರತೆ ಇದೆ. ಇದರ ಪರಿಣಾಮ ವಿದ್ಯಾರ್ಥಿಗಳಿಗೆ ಸಮರ್ಪಕ ತರಗತಿ ನಡೆಯುತ್ತಿಲ್ಲ. ಈ ಸಮಸ್ಯೆಗೆ ಪರಿಹಾರವಾಗಿ ಕಾಯಂ ಉಪನ್ಯಾಸಕರ ಬದಲು ಸರ್ಕಾರ ಪ್ರತಿ ವರ್ಷ ಅತಿಥಿ ಉಪನ್ಯಾಸಕರ ನೇಮಕಾತಿ ಮಾಡುತ್ತಿದೆ. ಈಗ ಅತಿಥಿ ಉಪನ್ಯಾಸಕರ ನೇಮಕದಲ್ಲಿಯೂ ವಿಳಂಬವಾಗಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ತರಗತಿಗಳು ಶುರುವಾಗಿ 50 ದಿನಗಳು ಕಳೆದ ನಂತರ ಅತಿಥಿ ಉಪನ್ಯಾಸಕರ ನೇಮಕಾತಿಗೆ ಆದೇಶ ಮಾಡಿದೆ. ಇದರಿಂದ ವಿದ್ಯಾರ್ಥಿಗಳಿಗೆ ತರಗತಿ ನಷ್ಟ ಆಗುತ್ತಿದೆ. ಸರ್ಕಾರ ಕಾಯಂ ಉಪನ್ಯಾಸಕರ ನೇಮಕಾತಿಗೆ ಆದ್ಯತೆ ನೀಡಬೇಕೆಂದು ಪ್ರತಿಭಟನೆಯಲ್ಲಿ ಒತ್ತಾಯಿಸಲಾಯಿತು.
ತಹಸೀಲ್ದಾರ್‌ಗೆ ಬೇಡಿಕೆಗಳ ಮನವಿಯನ್ನು ಸಲ್ಲಿಸಲಾಯಿತು. ಎ.ಬಿ.ವಿ.ಪಿ. ನಗರಾಧ್ಯಕ್ಷ ಕುಲದೀಪ್ ಪೆಲತಡ್ಕ, ತಾಲೂಕು ಎ.ಬಿ.ವಿ.ಪಿ. ಸಂಚಾಲಕ ನಂದಕುಮಾರ್ ಐವರ್ನಾಡು, ಎನ್ನೆಂಸಿ ಎಬಿವಿಪಿ ಅಧ್ಯಕ್ಷ ಪುನೀತ್ ಹುಲಿಮನೆ, ಉಪಾಧ್ಯಕ್ಷ ಜಸ್ವಂತ್, ಪ್ರೀತೇಶ್ ಕಣೆಮರಡ್ಕ, ಆದಿತ್ಯನ್ ಕದಿಕಡ್ಕ, ಭರತ್ ಅಡ್ಕಾರು, ಆಕಾಶ್ ಗರುಗುಂಜ, ದೇವಿಪ್ರಸಾದ್ ಚೆಂಬು, ರೋಹನ್ ಗುತ್ತಿಗಾರು, ಚರಣ್‌ರಾಜ್ ದೊಡ್ಡತೋಟ, ಮಿಥುನ್ ತೋಡಿಕಾನ, ಸುದರ್ಶನ ಕಲ್ಲುಗುಂಡಿ, ಮೋನಿಶ್ ಪೆರಾಜೆ, ಶಬರೀಶ್ ಸುಳ್ಯ, ಸರ್ವೇಶ್ ಮತ್ತಿತರರು ಇದ್ದರು.