

ಹುಬ್ಬಳ್ಳಿ : ಇಲ್ಲಿನ ಉಣಕಲ್ಲನ ಡಾ. ಗಂಗೂಬಾಯಿ ಹಾನಗಲ್ ಗುರುಕುಲವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹಸ್ತಾಂತರಿಸುವಂತೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಗುರುಕುಲದ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಗುರುಕುಲವನ್ನು ಮೈಸೂರಿನ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಿರುವುದನ್ನು ಪ್ರತಿಭಟನಾಕಾರರು ಖಂಡಿಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಪ್ರತಿಭಟನೆಯಲ್ಲಿ ಗುರುಕುಲದ ವಿದ್ಯಾರ್ಥಿಗಳು ಸಹ ಪಾಲ್ಗೊಂಡು, ತಬಲಾ, ವೀಣೆ ಹಾಗೂ ಇತರ ಸಂಗೀತ ಪರಿಕರದೊಂದಿಗೆ ಗಾಯನ ಪ್ರಸ್ತುತ ಪಡಿಸಿ, ಹಾಡುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದರು.
ಗುರುಕುಲದಲ್ಲಿ ಪ್ರವೇಶಿಸಿ, ಪರೀಕ್ಷೆ ನಡೆಯುತ್ತಿರುವುದನ್ನು ತಡೆಯಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು. ಮೈಸೂರು ವಿಶ್ವವಿದ್ಯಾಲಯದ ಸಂಗೀತ ಪ್ರವೇಶದ ಮಾಹಿತಿ ಇರುವ ಬ್ಯಾನರ್ಗಳನ್ನು ಪ್ರತಿಭಟನಾಕಾರರು ಹರಿದರು.
ಸ್ಥಳಕ್ಕೆ ಆಗಮಿಸಿದ ಹುಬ್ಬಳ್ಳಿ ಶಹರ ತಹಶೀಲ್ದಾರ ಕಲನಗೌಡ ಪಾಟೀಲ ಹಾಗೂ ಎಸಿಪಿ ಶಿವಪ್ರಕಾಶ ನಾಯ್ಕ, ಪ್ರತಿಭಟನಾಕಾರರ ಮನವೊಲಿಕೆಗೆ ಯತ್ನಿಸಿದರು. ಆದರೆ, ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸುವಂತೆ ಪ್ರತಿಭಟನಾಕಾರರು ಪಟ್ಟು ಹಿಡಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹಿಂದೂಸ್ತಾನಿ ಗಾಯಕ ಜಯತೀರ್ಥ ಮೇವುಂಡಿ ಮಾತನಾಡಿ, ಗುರುಕುಲ ಮಾದರಿಯ ಶಿಕ್ಷಣ ನೀಡುವ ದೇಶದ ಏಕೈಕ ಮಹಾವಿದ್ಯಾಲಯ ಇದಾಗಿದೆ. ನೂರಾರು ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಿರುವ ಈ ಗುರುಕುಲವನ್ನು ಮೈಸೂರು ವಿವಿಗೆ ಹಸ್ತಾಂತರಿಸಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಂದು ವರ್ಷದಿಂದ ಸಮರ್ಪಕ ನಿರ್ವಹಣೆ ಇಲ್ಲದೇ ಕಟ್ಟಡ ಹಾಳಾಗಿದೆ. ಸಂಗೀತದ ಜ್ಞಾನಾರ್ಜನೆಗಾಗಿ ಇಲ್ಲಿಗೆ ವಿದ್ಯಾರ್ಥಿಗಳು ಬರುತ್ತಾರೆಯೇ ಹೊರತು, ಕೇವಲ ಪ್ರಮಾಣ ಪತ್ರಕ್ಕಾಗಿ ಅಲ್ಲ. ಸರ್ಕಾರ ಎಲ್ಲವನ್ನೂ ಲಾಭದ ದೃಷ್ಟಿಯಿಂದ ನೋಡಬಾರದು. ಗುರುಕುಲ ಮಾದರಿ ಶಿಕ್ಷಣ ಉಳಿಸಿಕೊಳ್ಳಲು ಸಂಗೀತ ಕಲಾವಿದರೆಲ್ಲ ಒಂದಾಗಿ ಹೋರಾಟ ನಡೆಸುತ್ತೇವೆ ಎಂದರು.
ಎಬಿವಿಪಿ ಸದಸ್ಯ ಮಣಿಕಂಠ ಕಳಸ ಮಾತನಾಡಿ, ಗುರುಕುಲ ಉಳಿಸುವಂತೆ ಜಿಲ್ಲಾಕಾರಿ ಅವರಿಗೆ ಮನವಿ ಸಲ್ಲಿಸಲಾಗಿದೆ. ಇದುವರೆಗೂ ಕ್ರಮ ಕೈಗೊಂಡಿಲ್ಲ. ಸಧ್ಯ ಸಾಂಕೇತಿಕ ಪ್ರತಿಭಟನೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಹೇಳಿದರು.
ಎಬಿವಿಪಿ ಕರ್ನಾಟಕ ಉತ್ತರದ ರಾಜ್ಯ ಕಾರ್ಯದರ್ಶಿ ಸಚಿನ್ ಕುಳಗೇರಿ, ಮಣಿಕಂಠ ಕಳಸ, ತೇಜಸ್ ಗೋಕಾಕ, ಪ್ರಥ್ವಿರಾಜ್, ಸಿದ್ಧಾರ್ಥ ಕೋರಿ, ದಾನೇಶ, ವಿಜಯ, ಸಂಗೀತ ವಿದ್ಯಾರ್ಥಿಗಳಾದ ಮಹೇಶ ಹುಂಡೇಕರ, ಶ್ವೇತಾ ಕಳ್ಳಿಮಠ, ಯಶರಾಜ್ ಶೆವಾಲೆ, ಓಂಕಾರ ಪತ್ತಾರ ಹಾಗೂ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.