ಎಬಿವಿಪಿಯಿಂದ ಪ್ರತಿಭಟನೆ, ರಾಜ್ಯದ ವಿಶ್ವವಿದ್ಯಾಲಯಗಳಿಗೆ ಅನುದಾನ‌ ನೀಡುವಂತೆ ಆಗ್ರಹ

Screenshot_2023-08-04-19-48-28-46.jpg
Published on

ಬೆಳಗಾವಿ: ರಾಜ್ಯದ ವಿಶ್ವವಿದ್ಯಾಲಯಗಳಿಗೆ ಸಕಾಲದಲ್ಲಿ ಅನುದಾನ ಬಿಡುಗಡೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ನಿಂದ ನಗರದ ಆರ್‌ಪಿಡಿ ವೃತ್ತದಲ್ಲಿ  ಶುಕ್ರವಾರ ಪ್ರತಿಭಟನೆ ನಡೆಯಿತು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ರವಾನಿಸಿದರು.
 ರಾಜ್ಯ ವಿಶ್ವವಿದ್ಯಾಲಯವನ್ನು ಕಡೆಗಣಿಸುತ್ತಿರುವ ರಾಜ್ಯ ಸರ್ಕಾರದ ನಡೆ ಖಂಡನೀಯ. ಸರ್ಕಾರ ಮತ್ತು ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಹಿತ ಕಾಪಾಡುವಲ್ಲಿ ವಿಫಲವಾಗಿವೆ. ವಿವಿಗಳಿಗೆ ಸಕಾಲದಲ್ಲಿ ಅನುದಾನ ಬಿಡುಗಡೆ ಮಾಡದಿರುವುದು ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಕೂಡಲೇ ವಿಶ್ವವಿದ್ಯಾಲಯಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು. ಪರೀಕ್ಷೆಗಳು ಮುಗಿದ ಬಳಿಕ ನಿಗದಿತ ವೇಳೆಯಲ್ಲಿ ಫಲಿತಾಂಶ ನೀಡುವಂತೆ ಸರ್ಕಾರ ವಿವಿಗಳಿಗೆ ನಿರ್ದೇಶನ ನೀಡಬೇಕು. ಅಂಕಪಟ್ಟಿ ಮತ್ತು ಘಟಿಕೋತ್ಸವ ಪ್ರಮಾಣಪತ್ರನೀಡಲು ಇರುವ ತಾಂತ್ರಿಕ ದೋಷವನ್ನು ಸರಿಪಡಿಸಿ ವಿದ್ಯಾರ್ಥಿಗಳಿಗೆ ಸಕಾಲಕ್ಕೆ ತಲುಪಿಸಬೇಕು. ವಿವಿಗಳಲ್ಲಿರುವ ಕೊರತೆ ಇರುವ ಕಾಯಂ ಅಧ್ಯಾಪಕರ ಹುದ್ದೆಯನ್ನು ತುಂಬಬೇಕು. ವಿವಿಗಳಲ್ಲಿ ಮೂಲ ಸೌಕರ್ಯ, ಬೋಧಕೇತರ ಸಿಬ್ಬಂದಿ, ಹಾಸ್ಟೆಲ್‌ಗಳ ವ್ಯವಸ್ಥೆ ಕಲ್ಪಿಸಲು ಸರ್ಕಾರ ಗಮನ ಹರಿಸಬೇಕು. ಕೆಲವು ವಿಶ್ವವಿದ್ಯಾಲಯಗಳಲ್ಲಿ ವರ್ಷ ಕಳೆದರೂ ಪದವಿ ಪ್ರಮಾಣ ಪತ್ರಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಕೂಡಲೇ ಎಲ್ಲ ವಿವಿಗಳಿಗೆ ಸರಿಯಾದ ಸಮಯಕ್ಕೆ ನೀಡುವಂತೆ ಸೂಚನೆ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.
ಸಚಿನ್ ಹಿರೇಮಠ, ಪ್ರಶಾಂತ ಶೆಲ್ಲಿಕೇರಿ, ಸಮ್ಮೇದ ಕವಟಕೊಪ್ಪ, ಕೀರ್ತಿ ರೇವಣಕರ, ದೇವು ಸಣ್ಣಪ್ಪನವರ, ಸುಹಾಸ್ ಹುದ್ದಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net