ಹತ್ಯೆ ಪ್ರಕರಣ ಸಿಬಿಐಗೆ ವಹಿಸುವಂತೆ ಒತ್ತಾಯಿಸಿ ಎಬಿವಿಪಿ ಪ್ರತಿಭಟನೆ

New ABVP New
Published on

ಹುಬ್ಬಳ್ಳಿ : ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಇಲ್ಲಿನ ವಿದ್ಯಾನಗರದಲ್ಲಿ ರಸ್ತೆ ತಡೆ ನಡೆಸಿ, ಪ್ರತಿಭಟನೆ ನಡೆಸಿದರು.

ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡುತ್ತಿರುವ ಹೇಳಿಕೆಗಳು ತನಿಖೆಯ ದಾರಿ ತಪ್ಪಿಸುವಂತಿವೆ. ಹೀಗಾಗಿ, ಸೂಕ್ತ ತನಿಖೆಗಾಗಿ ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.

ಪರಿಷತ್ ರಾಜ್ಯ ಸಂಘಟನಾ ಕಾರ್ಯದರ್ಶಿ ಪೃಥ್ವಿ ಕುಮಾರ ಮಾತನಾಡಿ, ಈ ಲವ್ ಜಿಹಾದ್ ನ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಬೇಕು. ರಾಜ್ಯ ಸರ್ಕಾರ ಸರಿಯಾದ ರೀತಿಯಲ್ಲಿ ತನಿಖೆಗೆ ಮಾಡುವ ಬಗ್ಗೆ ಭರವಸೆ ಇಲ್ಲ. ಕೊಲೆ ಆರೋಪಿ ಫಯಾಜ್​ಗೆ ಗಲ್ಲು ಶಿಕ್ಷೆ ಆಗಬೇಕು ಎಂದು ಒತ್ತಾಯ ಮಾಡಿದರು.

ಪರಿಷತ್ ಪ್ರಮುಖ ಮಣಿಕಂಠ ಕಳಸ ಮಾತನಾಡಿ, ಈ ಹತ್ಯೆ ವ್ಯವಸ್ಥಿತ ಸಂಚು ಆಗಿದೆ. ಈ ಹತ್ಯೆಯಲ್ಲಿ ಇನ್ನೂ ಹಲವಾರು ಕಾಣದ ಕೈಗಳು ಕೆಲಸವನ್ನು ಮಾಡಿವೆ. ಈ ಸಂಚಿನ ಹಿಂದಿರುವ ವ್ಯಕ್ತಿಗಳ ಬಂಧನ ಆಗಬೇಕು ಎಂದರು.

ವಿದ್ಯಾರ್ಥಿಗಳು ಕಪ್ಪು ಪಟ್ಟಿಯನ್ನು ಧರಿಸಿ, ‘ಅಮರ ರಹೇ.. ಅಮರ ರಹೇ.. ನೇಹಾ ಅಮರ ರಹೇ..,’ ‘ರಕ್ತದ ಕಣಕಣ ಕುದಿಯುತ್ತಿದೆ ನೇಹಾ ನೇಹಾ ಎನ್ನುತ್ತಿದೆ’ ಎಂಬ ಘೋಷಣೆಗಳನ್ನು ಕೂಗಿದರು.

ವಿದ್ಯಾರ್ಥಿಗಳಾದ ನಾಗರಾಜ, ರಮೇಶ, ಶಿವು ಹಿರೇಮಠ, ಸಿದ್ದಾರ್ಥ ಕೋರಿ, ರಾಘವೇಂದ್ರ, ಶಶಿ ಆರ್., ಅನ್​ವೋಲ್ ಕಲ್ಬುರ್ಗಿ, ಸಂದ್ಯಾ ಹಳ್ಳಿಕೆರೆ, ಚಂದನ ಕೂಡ್ಲಿ, ಭರತ್ ರೆಡ್ಡಿ, ಮೋನೇಶ್ ಗೌಡ ಹಾಗೂ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net