ಕುವೆಂಪು ಘೋಷ ವಾಕ್ಯ ತಿದ್ದುಪಡಿ ಖಂಡಿಸಿ ಎಬಿವಿಪಿ ಪ್ರತಿಭಟನೆ

ABVP PROTEST WITH KUVEMPU PHOTO
ವಿಜಯಪುರದ ಮಹಾತ್ಮ ಗಾಂಧಿ ವೃತ್ತದಲ್ಲಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸಚಿನ ಕುಳಗೇರಿ, ಮಲ್ಲಿಕಾರ್ಜುನ ಮಾಳಿ, ಸಿದ್ದು ಪತ್ತಾರ್, ರೇಖಾ ಮಾಳಿ ಮತ್ತಿತರರಿದ್ದಾರೆ.
Published on

ವಿಜಯಪುರ: ‘ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ’ ಎಂಬ ಕುವೆಂಪು ಅವರ ವಾಕ್ಯ ಬದಲಾಯಿಸಲು ಹೊರಟಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಗಾಂಧಿ ವೃತ್ತದಲ್ಲಿ ಸೋಮವಾರ ಕುವೆಂಪು ಅವರ ಭಾವಚಿತ್ರ ಹಿಡಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಮಾತನಾಡಿ, ಕರ್ನಾಟಕ ರಾಜ್ಯ ಶಾಲೆ-ಕಾಲೇಜು ಮತ್ತು ವಿಶ್ವ ವಿದ್ಯಾಲಯಗಳಲ್ಲಿ ಕೆಲವೊಂದಿಷ್ಟು ಕಾರಣಕ್ಕೆ ಸರ್ಕಾರವು ಗೊಂದಲವನ್ನು ಸೃಷ್ಟಿ ಮಾಡುತ್ತಿದೆ. ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುವ ಶಾಲೆಗಳಲ್ಲಿ ಸರಸ್ವತಿ, ಗಣಪತಿ ಮತ್ತಿತರ ಧಾರ್ಮಿಕ ಪೂಜೆ ಮಾಡುವುದನ್ನು ನಿಷೇಧ ಮಾಡಿ ಗೊಂದಲ ಸೃಷ್ಟಿ ಮಾಡಿತ್ತು, ಈಗ ಮತ್ತೆ ವಸತಿ ಶಾಲೆಗಳಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪು ಅವರ ವಾಕ್ಯವನ್ನೇ ಬದಲಾವಣೆ ಮಾಡಿ ‘ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’ ಎಂದು ಬರೆಯಲಾಗಿದೆ. ಈ ನಡೆ ಖಂಡನೀಯ ಎಂದರು.

ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ಮಲ್ಲಿಕಾರ್ಜುನ ಮಾಳಿ ಮಾತನಾಡಿ, ಈ ರೀತಿಯ ಘಟನೆಗಳಿಂದ ಬಹು ಸಂಖ್ಯಾತ ವಿದ್ಯಾರ್ಥಿ ಸಮುದಾಯ ಪ್ರೇರಣಾದಾಯಕವಾಗಿರುವ ಸರಸ್ವತಿ ದೇವಿ ಹಾಗೂ ಕರ್ನಾಟಕ ರಾಜ್ಯದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪುರವರ ವಾಕ್ಯಗಳನ್ನು ತಿರುಚಿ ಸರ್ಕಾರ ವಿದ್ಯಾರ್ಥಿ ಸಮುದಾಯಕ್ಕೆ ಯಾವ ಸಂದೇಶ ಕೊಡಲು ಹೊರಟಿದೆ ಎಂಬುದು ರಾಜ್ಯದ ವಿದ್ಯಾರ್ಥಿ ಸಮುದಾಯದ ಪ್ರಶ್ನೆಯಾಗಿದೆ. ಈ ರೀತಿಯ ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಸಿದ್ದಾಂತದ ರಾಜಕಾರಣವನ್ನು ಸೇರ್ಪಡೆ ಮಾಡಲು ಹೊರಟಿರುವ ಸರ್ಕಾರದ ನಡೆ ಖಂಡನೀಯ. ವಿದ್ಯಾರ್ಥಿ ಸಮುದಾಯ ಶಿಕ್ಷಣ, ದೇಶ, ರಾಷ್ಟ್ರೀಯತೆ, ಭಾರತೀಯ ಸಂಸ್ಕಾರದ ವಿಚಾರದಡಿಯಲ್ಲಿ ಮುಂದುವರೆಯಬೇಕೆ ಹೊರತು ಪಕ್ಷದ ಸಿದ್ಧಾಂತವನ್ನು ವಿದ್ಯಾರ್ಥಿಗಳ ಮೇಲೆ ಹೇರಲು ಹೊರಟಿರುವುದು ಶೋಚನೀಯ ಸಂಗತಿ ಎಂದರು.

ಸಿದ್ದು ಪತ್ತಾರ್, ರೇಖಾ ಮಾಳಿ, ಪೂಜಾ ವೀರಶೆಟ್ಟಿ, ಶ್ರವಣ ಕಾತ್ರಾಳ, ಅಭಿಷೇಕ್ ಬಿರಾದಾರ, ಅಮಿತ್ ಬನಗಾರ, ಶಿವನಗೌಡ ಬಿರಾದಾರ, ರೇವಣಸಿದ್ಧ ನಾವಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net