

ವಿಜಯಪುರ: ರಾಷ್ಟ್ರೀಯ ನೂತನ ಶಿಕ್ಷಣ ನೀತಿ (ಎನ್‌ಇಪಿ) ರದ್ಧತಿಗೆ ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವ ನೂರಾರು ವಿದ್ಯಾರ್ಥಿಗಳು ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಸರ್ಕಾರಿ ಪಪೂ ಕಾಲೇಜಿನಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಮಹಾತ್ಮ ಗಾಂಧಿ ವೃತ್ತದ ಮಾರ್ಗವಾಗಿ ಜಿಲ್ಲಾಡಳಿತ ಕಚೇರಿ ತಲುಪಿ ಸಮಾವೇಶವಾಗಿ ಮಾರ್ಪಟ್ಟಿತು. ಸರ್ಕಾರದ ವಿರುದ್ಧ ಕೆಲ ಕಾಲ ಘೋಷಣೆ ಕೂಗಿದ ಪದಾಧಿಕಾರಿಗಳು ಬಳಿಕ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ವಿಭಾಗ ಸಂಘಟನಾ ಕಾರ್ಯದರ್ಶಿ ಗಂಗಾಧರ ಮಾತನಾಡಿ, ಸ್ವತಂತ್ರ ಭಾರತದ ಶಿಕ್ಷಣ ಪದ್ಧತಿ ಬ್ರಿಟಿಷ್ ವಸಾಹತು ಶಾಹಿ ಶಿಕ್ಷಣ ಪದ್ಧತಿಯ ಮುಂದುವರಿದ ಭಾಗವಾಗಿದೆ. ಬ್ರಿಟಿಷ್ ಗುಲಾಮಗಿರಿ ಪಳಿವಳಿಕೆಯ ಭಾಗವಾಗಿದೆ. ಇದನ್ನು ಅಳಿಸಲೆಂದೇ ರಾಷ್ಟ್ರೀಯ ನೂತನ ಶಿಕ್ಷಣ ನೀತಿ ಜಾರಿಗೊಳಿಸಲಾಗಿದೆ. ಇದೀಗ ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರ ಈ ನೀತಿಯನ್ನು ರದ್ದುಗೊಳಿಸಲು ಹೊರಟಿರುವುದು ಖಂಡನೀಯ ಎಂದರು.
ಪ್ರಸ್ತುತ ರಾಜ್ಯ ಸರ್ಕಾರದ ನೀತಿ ಸೇಡಿನ ರಾಜಕೀಯದಿಂದ ಕೂಡಿದೆ. ಈ ಹಿಂದಿನ ರಾಜ್ಯ ಬಿಜೆಪಿ ಸರ್ಕಾರ ಅನುಷ್ಟಾನಗೊಳಿಸಿದೆ ಎಂಬ ಕಾರಣಕ್ಕೆ ಈ ನೀತಿಯನ್ನು ಕೈಬಿಡುತ್ತಿದೆ. ಹೀಗಾಗಿ ಸೇಡಿನ ರಾಜಕೀಯದಿಂದ ಹಿಂದೆ ಸರಿಯಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ನಗರ ಕಾರ್ಯದರ್ಶಿ ಸುರೇಖಾ ಕುಲಕರ್ಣಿ, ಗಂಗಾಧರ ಹಂಚಗಿ, ರೇಖಾ ಮಾಳಿ, ಮಲ್ಲಿಕಾರ್ಜುನ ಮಾಳಿ, ಸಿದ್ದು ಪತ್ತಾರ, ಅಭಿಷೇಕ ಗೌಡರ ಮತ್ತಿತರರಿದ್ದರು.