

ತುಮಕೂರು: ವಿದ್ಯಾರ್ಥಿಗಳ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಶುಕ್ರವಾರ ಜಿಲ್ಲಾಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಜಿಲ್ಲೆಯ ವಿವಿಧ ತಾಲೂಕು ಕೇಂದ್ರದಲ್ಲಿಯೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಸರ್ಕಾರದ ಮೇಲೆ ಒತ್ತಡ ತಂದರು. ಸಂಘಟನೆಯ ಪ್ರಮುಖರಾದ ಅಪ್ಪು ಪಾಟೀಲ್ ಮಾತನಾಡಿ, ರಾಜ್ಯದಲ್ಲಿ ಕರೊನಾ ಸಾಂಕ್ರಾಮಿಕ ವ್ಯಾಪಿಸಲಾರಂಭಿಸಿದ ಬಳಿಕ ಸ್ಥಗಿತಗೊಂಡಿದ್ದ ಶಾಲಾ ಕಾಲೇಜುಗಳು ಹಂತಹಂತವಾಗಿ ಪುನರಾರಂಭಗೊಂಡಿವೆ. ಭೌತಿಕ ತರಗತಿಗಳು ಆರಂಭಗೊಂಡ ಬಳಿಕ ದಿನಕ್ಕೊಂದು ಸಮಸ್ಯೆ ಉದ್ಭವವಾಗುತ್ತಿದೆ ಎಂದರು.
ಶಾಲೆ-ಕಾಲೇಜುಗಳು ಆರಂಭವಾಗಿ ವಿದ್ಯಾರ್ಥಿಗಳು ಕಲಿಕೆಯ ಕಡೆಗೆ ಉತ್ಸಾಹದಿಂದ ಗಮನ ಹರಿಸಿದ್ದಾರೆ, ಕರೊನಾ ಕಾರಣಕ್ಕೆ ಬದಲಾದ ತರಗತಿಗಳ ಸಮಯಕ್ಕೆ ಹಾಜರಾಗಲು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಎಲ್ಲ ಬಸ್‌ಗಳು ಸೇವೆ ಒದಗಿಸುತ್ತಿವೆ. ಆದರೂ, ಲಾಕ್‌ಡೌನ್ ಕಾರಣಕ್ಕೆ ಸ್ಥಗಿತಗೊಂಡಿದ್ದ ಸಾರಿಗೆ ಸೇವೆ ಕೆಲ ಹಳ್ಳಿಗಳಲ್ಲಿ ಇನ್ನೂ ಪುನರಾರಂಭವಾಗಿಲ್ಲ ಎಂದರು.
ಡಿಪ್ಲೋಮಾ ಇಂಜಿನಿಯರಿಂಗ್, ಸ್ನಾತಕ-ಸ್ನಾತಕೋತ್ತರ ತರಗತಿಗಳಲ್ಲಿ ಮತ್ತು ಪಿಎಚ್‌ಡಿ ಮಾಡುತ್ತಿರುವ ಪ.ಜಾತಿ, ಪ.ಪಂಗಡ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಪೂರ್ಣ ಪ್ರಮಾಣದಲ್ಲಿ ಶಿಷ್ಯವೇತನ ಪಡೆಯದೇ ಪರದಾಡುವಂತಾಗಿದೆ. ರಾಜ್ಯ ಸರ್ಕಾರ ಈ ಎಲ್ಲ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದಲ್ಲಿ ವಿದ್ಯಾಸಿರಿ ಶಿಷ್ಯವೇತನ ಸೇರಿದಂತೆ ಎಲ್ಲ ವಿದ್ಯಾರ್ಥಿವೇತನವನ್ನು ತಕ್ಷಣಕ್ಕೆ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.
ಎಬಿವಿಪಿ ಕಾರ್ಯಕರ್ತರಾದ ಪ್ರತಾಪ್, ಮಧ್ವೇಶ್, ಚೈತ್ರಾ, ಸಿದ್ಧಾರ್ಥ್, ಸುಷ್ಮಾ, ಲೋಕೇಶ್ ಗೌಡ, ಕಾರ್ತೀಕ್, ಸಂತೋಷ್, ಭೀಮರಾಯ್, ರಂಜಿನಿ ಸೇರಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಇದ್ದರು.