ಹಾನಗಲ್ಲನಲ್ಲಿ ಎಬಿವಿಪಿ ಪ್ರತಿಭಟನೆ

23-HNL-1
Published on

ಹಾನಗಲ್ಲ: ವಸತಿ ನಿಲಯಗಳಲ್ಲಿ ಮೂಲಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಪಟ್ಟಣದ ಮಹಾತ್ಮ ಗಾಂಧಿ ವೃತ್ತದಲ್ಲಿ ಎಬಿವಿಪಿ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.

ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಅಭಿಷೇಕ ದೊಡ್ಡಮನಿ ಮಾತನಾಡಿ, ವಸತಿ ನಿಲಯಗಳಲ್ಲಿ ಮೂಲಸೌಕರ್ಯಗಳಿಲ್ಲದೆ ವಿದ್ಯಾರ್ಥಿಗಳ ಪರದಾಡುವಂತಾಗಿದೆ. ಊಟ, ವಸತಿಯೂ ಸಮರ್ಪಕವಾಗಿಲ್ಲ. ಸರ್ಕಾರ ವಸತಿ ನಿಲಯಕ್ಕೆ ಅಗತ್ಯ ಅನುದಾನ ಬಿಡುಗಡೆಗೊಳಿಸುತ್ತಿಲ್ಲ ಎಂದು ಆರೋಪಿಸಿದರು.

ಸರ್ಕಾರ ಹೇಳುವುದೇ ಬೇರೆ, ನಡೆದುಕೊಳ್ಳುವುದೇ ಬೇರೆ. ವಿದ್ಯಾರ್ಥಿಗಳ ಹಿತ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಮೂಲಸೌಕರ್ಯಗಳಾದ ಶುದ್ಧ ಕುಡಿಯುವ ನೀರು, ಊಟ, ಶೌಚಗೃಹ, ಗ್ರಂಥಾಲಯ ಒದಗಿಸುತ್ತಿಲ್ಲ. ವಸತಿ ನಿಲಯಗಳಿಗಾಗಿ ಅರ್ಜಿ ಸಲ್ಲಿಸಿದ ಶೇ. 40 ರಷ್ಟು ವಿದ್ಯಾರ್ಥಿಗಳಿಗೂ ಹಾಸ್ಟೆಲ್ ಸೌಲಭ್ಯ ಒದಗಿಸಲಾಗುತ್ತಿಲ್ಲ. ಲಕ್ಷಾಂತರ ವಿದ್ಯಾರ್ಥಿಗಳಿಗೆ ಕಳೆದ ವರ್ಷದ ವಿದ್ಯಾರ್ಥಿ ವೇತನವೂ ಬಂದಿಲ್ಲ. ವಿದ್ಯಾಸಿರಿ ವಿದ್ಯಾರ್ಥಿ ವೇತನವೂ ಸಿಕ್ಕಿಲ್ಲ. ರೈತರ ಮಕ್ಕಳಿಗೆ ನೀಡಬೇಕಾದ ರೈತ ವಿದ್ಯಾನಿಧಿ ಸರ್ಕಾರ ಬಂದ್ ಮಾಡಿದೆ. ಹಿಂದುಳಿದ ವರ್ಗಗಳ ಮಕ್ಕಳ ಹಿತ ಕಾಪಾಡಬೇಕಾದ ಸರ್ಕಾರ ನಿರ್ಲಕ್ಷ್ಯ ಧೋರಣೆ ತಳೆದಿದೆ. ಸರ್ಕಾರ ತಕ್ಷಣ ವಿದ್ಯಾರ್ಥಿ ನಿಲಯಗಳ ಸಮಸ್ಯೆ ಪರಿಹರಿಸದಿದ್ದರೆ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.

ಹಾಸ್ಟೆಲ್​ಗಳಿಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಕೂಡಲೇ ಪ್ರವೇಶ ನೀಡಬೇಕು. ವಿದ್ಯಾರ್ಥಿಗಳಿಗೆ ಸರ್ಕಾರದಿಂದ ನೀಡುವ ಕಿಟ್​ಗಳನ್ನು ತಕ್ಷಣ ಒದಗಿಸಬೇಕು. ಪ್ರತಿ ವಿದ್ಯಾರ್ಥಿಯ ಊಟಕ್ಕಾಗಿ ನೀಡುವ 1850 ರೂ. ಸಾಲುವುದಿಲ್ಲ. ಇದನ್ನು ಇಂದಿನ ಬೆಲೆಗಳಿಗೆ ಅನುಸರಿಸಿ ಹೆಚ್ಚಿಸಬೇಕು. ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಇಲಾಖೆಯ ವಸತಿ ನಿಲಯಗಳನ್ನು ಹೆಚ್ಚಿಸಬೇಕು. ಬಾಕಿ ಇರುವ ವಿದ್ಯಾರ್ಥಿ ವೇತನ ಕೂಡಲೆ ಬಿಡುಗಡೆಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ತಹಸೀಲ್ದಾರ್ ಎಸ್.ರೇಣುಕಾ ಅವರಿಗೆ ಮನವಿ ಸಲ್ಲಿಸಲಾಯಿತು. ರವಿ ನೆಗಳೂರ, ಪ್ರಜ್ವಲ್, ವೀರೇಶ ಸೋಮಯ್ಯಗಳಮಠ, ಶರತ್ ರ್ಬಾ, ಎಚ್.ರೇಣುಕಾ, ಜಯಲಕ್ಷ್ಮೀ ಸೂಡಂಬಿ, ಕೆ.ರಕ್ಷಿತಾ, ಆರ್.ಟಿ. ಗೌರಮ್ಮ, ಎಂ.ಎಚ್. ಪ್ರೀತಿ, ಪುಟ್ಟವ್ವ ಎಚ್., ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net