

ಧಾರವಾಡ: ನಗರದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡದಿರುವುದರಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಸರ್ಕಾರ ಕೂಡಲೇ ಬಾಕಿ ಅನುದಾನ ಬಿಡುಗಡೆ ಮಾಡಬೇಕು ಎಂದು ಎಬಿವಿಪಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ನಡೆದ ಪ್ರತಿಭಟನೆ ವೇಳೆ ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ನೂಕಾಟ ತಳ್ಳಾಟ ನಡೆಯಿತು.
‘ಕವಿವಿ ಉಳಿಸಿ’ ಎಂಬ ಬೇಡಿಕೆಯೊಂದಿಗೆ ಇಲ್ಲಿನ ಕರ್ನಾಟಕ ಕಾಲೇಜು ಆವರಣದಲ್ಲಿ ಜಮಾವಣೆಗೊಂಡ ಸಾವಿರಾರು ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿದರು. ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ತಡೆಯಲು ಮುಂದಾದರು. ಈ ವೇಳೆ ತಳ್ಳಾಟ ನಡೆಯಿತು.
ರಾಜ್ಯ ಕಾರ್ಯದರ್ಶಿ ಮಣಿಕಂಠ ಕಳಸ ಮಾತನಾಡಿ, ರಾಜ್ಯದಲ್ಲಿ ಶಿಕ್ಷಣ ಅಧೋಗತಿಯಾಗುತ್ತಿದ್ದು, ವಿಶ್ವವಿದ್ಯಾಲಯ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ವಿಶ್ವವಿದ್ಯಾಲಯಕ್ಕೆ ಕೂಡಲೇ ಅಗತ್ಯ ಅನುದಾನ ಹಾಗೂ ವಿದ್ಯಾರ್ಥಿವೇತನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿ ಸರ್ಕಾರಕ್ಕೆ ರವಾನೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಪ್ರಾಂತ ಸಂಟನಾ ಕಾರ್ಯದರ್ಶಿ ಪೃಥ್ವಿಕುಮಾರ ಜಿ., ವಿಭಾಗ ಸಂಚಾಲಕ ಅರುಣ ಅಮರಗೋಳ, ಜಿಲ್ಲಾ ಸಂಚಾಲಕ ವಿದ್ಯಾನಂದ ಸ್ಥಾವರಮಠ, ಕಾರ್ಯಕರ್ತರಾದ ಉಲ್ಲಾಸ ಗೋಡಿ, ಶಿವಕುಮಾರ, ಶಿವಾನಿ ಶೆಟ್ಟಿ, ಸ್ನೇಹಾ, ಗೌರೀಶ, ಬಸವರೆಡ್ಡಿ, ಮನೋಹರ, ವೆಂಕಟೇಶ, ಭೀಮಣ್ಣ, ಸಂಜಯ, ಅಯ್ಯನಗೌಡ, ಕಾರ್ತಿಕ, ಗಣಪತಿ, ಬಸವರಾಜ ಸುತಗಟ್ಟಿ, ಮಾರುತಿ, ಇತರರಿದ್ದರು.