ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

Published on

ಮೈಸೂರು: ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮೈಸೂರು ಘಟಕದಿಂದ ಜು.13ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ನಗರದ ರಾಮಸ್ವಾಮಿ ವೃತ್ತದಲ್ಲಿ ಅಂದು ಬೆಳಗ್ಗೆ 11ಕ್ಕೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಬೇಡಿಕೆ ಈಡೇರಿಕೆಗಾಗಿ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಎಬಿವಿಪಿ ವಿಭಾಗೀಯ ಸಂಚಾಲಕ ಎಂ.ಶಿವು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಸ್‌ಪಾಸ್, ಬಸ್ ಅವ್ಯವಸ್ಥೆಯಿಂದಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಕಾಲಕ್ಕೆ ಶಾಲಾ, ಕಾಲೇಜಿಗೆ ಹೋಗಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ಸರ್ಕಾರದ ಶಕ್ತಿ ಯೋಜನೆ ಬಳಿಕ ಬಸ್ ಅವ್ಯವಸ್ಥೆ ಇನ್ನೂ ಹೆಚ್ಚಾಗಿದೆ ಎಂದು ದೂರಿದರು.
ಶಾಲಾ, ಕಾಲೇಜು ಆರಂಭವಾಗಿದ್ದರೂ ಸಮಯಕ್ಕೆ ಸರಿಯಾಗಿ ತೆರಳಲು ಅನುಕೂಲವಾಗುವಂತೆ ಸಾಕಷ್ಟು ಸಂಖ್ಯೆಯಲ್ಲಿ ಬಸ್‌ಗಳಿಲ್ಲ. ಮೂರು ತಿಂಗಳು ಕಳೆಯುವವರೆಗೂ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶ ಸಿಗದಂತಾಗಿದೆ. ಇದರಿಂದಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚು ಅನನುಕೂಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದ ಎಲ್ಲ ವಿವಿಗಳಲ್ಲಿ ಏಕರೂಪದ ವೇಳಾಪಟ್ಟಿ ಜಾರಿಗೊಳಿಸಬೇಕು. ಬಸ್‌ಪಾಸ್, ಹಾಸ್ಟೆಲ್ ಸೌಲಭ್ಯ ಸಮರ್ಪಕವಾಗಿ ಸಕಾಲಕ್ಕೆ ಸಿಗಬೇಕು. ಹೀಗಾಗಿ ಈ ವಿಷಯಗಳಿಗೆ ಸಂಬಂಧಿಸಿದಂತೆ ಅಂದು ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಮುಖಂಡರಾದ ಪ್ರಜ್ವಲ್, ವಿಶ್ವಾಸ್, ವಸಂತ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net