ಎಬಿವಿಪಿ ವಿದ್ಯಾರ್ಥಿಗಳ ಪ್ರಕರಣ ಹೈಕೋರ್ಟ್​ನಲ್ಲಿ ವಜಾ

abvp
Published on

ಉಡುಪಿ: ರಾಜ್ಯ ಸರ್ಕಾರ ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಕಳೆದ ವರ್ಷ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​ ನಡೆಸಿದ ಪ್ರತಿಭಟನೆ ವಿರುದ್ಧ ನಗರ ಪೊಲೀಸ್​ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್​ ವಜಾಗೊಳಿಸಿದೆ.

ರಾಜ್ಯಾದ್ಯಂತ ಕ್ಯಾಂಪಸ್ಗಳಲ್ಲಿ ಭಯದ ವಾತಾವರಣವನ್ನು ಹೋಗಲಾಡಿಸಲು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ನಗರದ ಜೋಡುಕಟ್ಟೆಯಿಂದ ಪ್ರಾರಂಭವಾಗಿ ಸರ್ವಿಸ್​ ಬಸ್​ ಸ್ಟ್ಯಾಂಡ್​, ಕ್ಲಾಕ್​ ಟವರ್​ ವರೆಗೆ ಪ್ರತಿಭಟನಾ ಜಾಥಾ ನಡೆಸಿದ್ದರು. ಈ ಬಗ್ಗೆ ಎಬಿವಿಪಿಯ 15 ವಿದ್ಯಾರ್ಥಿ ನಾಯಕರ ಮೇಲೆ ಪ್ರಕರಣ ದಾಖಲಾಗಿತ್ತು. ಜಿಲ್ಲಾ ನ್ಯಾಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಜಾಮೀನು ಲಭಿಸಿತ್ತು. ರಿಟ್​ ಅರ್ಜಿ ಆಲಿಸಿದ ಹೈಕೋರ್ಟ್​ ನ್ಯಾಯಮೂರ್ತಿ ಎಸ್​.ಆರ್​ ಕೃಷ್ಣಕುಮಾರ್​ ನೇತೃತ್ವದ ಏಕ ಸದಸ್ಯ ಪೀಠ ವಿದ್ಯಾರ್ಥಿಗಳ ವಿರುದ್ಧ ಇರುವ ಪ್ರಕರಣವನ್ನು ವಜಾಗೊಳಿಸಿ, ವಿದ್ಯಾರ್ಥಿಗಳ ಪ್ರತಿಭಟನೆಯ ಹಕ್ಕನ್ನು ಎತ್ತಿ ಹಿಡಿದಿದೆ. ಹಿರಿಯ ವಕೀಲರಾದ ಅರುಣ್​ ಶ್ಯಾಮ್​ ಮಾರ್ಗದರ್ಶನದಲ್ಲಿ ಸುಯೋಗ್​ ನೇತೃತ್ವದ ತಂಡ ಎಬಿವಿಪಿ ಪರವಾಗಿ ವಾದ ಮಂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net