

ವಿಜಯಪುರ: ರಾಜ್ಯದ ವಿಶ್ವ ವಿದ್ಯಾಲಯಗಳನ್ನು ಕಡೆಗಣಿಸುತ್ತಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರ ಹೊರವಲಯದ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಪ್ರತಿಭಟನೆ ನಡೆಸಿ ಕುಲಸಚಿವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಪ್ರಾಂತ ಕಾರ್ಯ ಸಮಿತಿ ಸದಸ್ಯ ಸಚಿನ ಕುಳಗೇರಿ ಮಾತನಾಡಿ, ರಾಜ್ಯದ ವಿಶ್ವವಿದ್ಯಾಲಯಗಳಿಗೆ ಸಕಾಲದಲ್ಲಿ ಸರ್ಕಾರ ಅನುದಾನ ಬಿಡುಗಡೆ ಮಾಡದೆ ಇರುವ ಕಾರಣ ಅದರ ಹೊರೆಯನ್ನು ವಿದ್ಯಾರ್ಥಿಗಳ ಮೇಲೆ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಸರ್ಕಾರ ಕೂಡಲೇ ರಾಜ್ಯದ ವಿಶ್ವವಿದ್ಯಾಲಯಗಳಿಗೆ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ವಿದ್ಯಾರ್ಥಿನಿ ಕವಿತಾ ಉಟಗಿ ಮಾತನಾಡಿ, ರಾಜ್ಯದ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಪರೀಕ್ಷೆಗಳ ಫಲಿತಾಂಶವನ್ನು ಸರಿಯಾದ ಸಮಯಕ್ಕೆ ನೀಡುವಲ್ಲಿ ವಿಫಲವಾಗಿದೆ. ಕೆಲವೆಡೆ ಫಲಿತಾಶ ನೀಡಿದ ಮೇಲೆ ಅಂಕಪಟ್ಟಿಗಳು ವಿದ್ಯಾರ್ಥಿಗಳಿಗೆ ತಲುಪಲು ವಿಳಂಬವಾಗುತ್ತಿದೆ. ಇದರಿಂದ ಪರೀಕ್ಷೆ ಬರೆದ ಅಂತಿಮ ವರ್ಷದ ವಿದ್ಯಾರ್ಥಿಗಳು ತಮ್ಮ ಮುಂದಿನ ಶಿಕ್ಷಣಕ್ಕೆ ಮತ್ತು ಇನ್ನಿತರ ಕೆಲಸಗಳಿಗೆ ತೊಂದರೆ ಅನುಭವಿಸುತ್ತಿದ್ದಾರೆ. ಕೆಲವು ವಿಶ್ವವಿದ್ಯಾನಿಲಯಗಳಲ್ಲಿ ವರ್ಷ ಕಳೆದರೂ ಪದವಿ ಪ್ರಮಾಣ ಪತ್ರಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಕೂಡಲೇ ಎಲ್ಲ ವಿಶ್ವ ವಿದ್ಯಾಲಯಗಳಿಗೆ ಫಲಿತಾಂಶ ಮತ್ತು ಅಂಕಪಟ್ಟಿಯನ್ನು ಸರಿಯಾದ ಸಮಯಕ್ಕೆ ನೀಡುವಂತೆ ಸೂಚನೆ ನೀಡಬೇಕಾಗಿ ಎಬಿವಿಪಿ ಆಗ್ರಹಿಸುತ್ತದೆ ಎಂದರು.
ಗಂಗಾಧರ ಹಂಜಗಿ, ಸಿದ್ದು ಪತ್ತಾರ, ಅಕ್ಷಯ ಯಾದವಾಡ, ಮಲ್ಲಿಕಾರ್ಜುನ ಮಾಳಿ, ಮಹಂತೇಶ ಕಂಬಾರ, ರೇಖಾ ಮಾಳಿ, ಪೂಜಾ ವೀರಶೆಟ್ಟಿ, ಸಂದೀಪ ಅರಲಿಚಂಡಿ, ಸೋನು ನಾಯಕ, ಅಭಿಷೇಕ ಬಿರಾದಾರ, ಕವಿತಾ ಬಿರಾದಾರ, ವಾನಿ ಗಿನ್ನಿ ಮತ್ತಿತರರಿದ್ದರು.