

ಪುತ್ತೂರು: ಹೆಣ್ಣನ್ನು ಪೂಜನೀಯ ಭಾವನೆಯಲ್ಲಿ ಕಾಣುವ ಮಣ್ಣಿನಲ್ಲಿ ಆಕೆಯೇ ನ್ಯಾಯ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಸೌಜನ್ಯ ಹತ್ಯೆಯನ್ನು ಖಂಡಿಸಿ ಹನ್ನೊಂದು ವರ್ಷದ ಹಿಂದೆ ರಾಜ್ಯ ವ್ಯಾಪ್ತಿ ಹೋರಾಟವನ್ನು ನಡೆಸಿ, ಅತ್ಯಾಚಾರಿಗಳಿಗೆ ಕಠಿಣ ಸಿಕ್ಷೆಯಾಗಬೇಕೆಂದು ಪರಿಷತ್ ಆಗ್ರಹಿಸಿತ್ತು. ನೈಜ ಆರೋಪಿಗಳನ್ನು ಬಂಧಿಸುವ ಕಾರ್ಯ ಇಲ್ಲಿಯ ತನಕ ನಡೆಯದಿರುವುದು ನಾಚಿಕೆಗೇಡಿನ ವಿಚಾರವಾಗಿದೆ. ರಾಜ್ಯದ ಪ್ರತಿ ಶಾಖೆಯಲ್ಲಿ ಹೋರಟವನ್ನು ನಡೆಸುವ ಮೂಲಕ ನ್ಯಾಯಕ್ಕಾಗಿ ಬೇಡಿಕೆ ಇಡುತ್ತಿದೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಜ್ಯ ಸಹ ಕಾರ್ಯದರ್ಶಿ ಹರ್ಷಿತ್ ಕೊಯಿಲ ಹೇಳಿದರು.
ಅವರು ಶುಕ್ರವಾರ ಪುತ್ತೂರು ಮಿನಿ ವಿಧಾನ ಸೌಧ ಸಮೀಪದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪುತ್ತೂರು ವತಿಯಿಂದ ಸೌಜನ್ಯ ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಆಗ್ರಹಿಸಿ ನಡೆಸಿದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ಎ.ಬಿ.ವಿ.ಪಿ. ನಗರ ಕಾರ್ಯಕಾರಿಣಿ ಸದಸ್ಯೆ ಸ್ವರ್ಣಗೌರಿ ಭಟ್ ಮಾತನಾಡಿ ಹೆಣ್ಣು ಮಕ್ಕಳಿಗೆ ಅನ್ಯಾಯವಾದಾಗ ವಿದ್ಯಾರ್ಥಿ ಪರಿಷತ್ತು ನ್ಯಾಯವನ್ನು ಕೇಳುವ ಕಾರ್ಯ ಮಾಡಿದೆ. ಸೌಜನ್ಯನಿಗೆ ನ್ಯಾಯ ತ್ವರಿತವಾಗಿ ಒದಗಿಸಬೇಕೆಂದು ಈಗಾಗಲೇ ತಾಲೂಕಿಗೆ ಮನವಿಯನ್ನು ನೀಡಲಾಗಿದ್ದು, ಅದಕ್ಕೆ ಯಾವುದೇ ಉತ್ತರ ನೀಡುವ ಕಾರ್ಯವಾಗಿಲ್ಲ. ಸೂಕ್ತ ಕ್ರಮಕೈಗೊಳ್ಳದೇ ಹೋದಲ್ಲಿ ಉಗ್ರ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ತಿಳಿಸಿದರು.
ನಿಕಟಪೂರ್ವ ಜಿಲ್ಲಾ ಸಂಚಾಲಕ ಮಂಜುನಾಥ ಜೋಡುಕಲ್ಲು, ತಾಲೂಕು ಸಂಚಾಲಕ ತೇಜಸ್ ಗೌಡ ಮತ್ತಿತರರು ಉಪಸ್ಥಿತರಿದ್ದರು. ಪುತ್ತೂರು ನಗರ ಪೊಲೀಸರು ಬಂದೋಬಸ್ತು ಕಲ್ಪಿಸಿದ್ದರು.