

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ವೀರ ವನಿತೆ ಕಿತ್ತೂರ ರಾಣಿ ಚನ್ನಮ್ಮ ಬ್ರಿಟಿಷ್ರ ವಿರುದ್ಧ ವಿಜಯ ಸಾಧಿಸಿದ 200 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಹಾಗೂ ಭಾರತದ ಮೊದಲ ಮಹಿಳಾ ಸ್ವತಂತ್ರ ಹೋರಾಟಗಾರ್ತಿ ವೀರರಾಣಿ ಅಬ್ಬಕ್ಕ ಅವರ 500ನೇ ಜಯಂತ್ಯುತ್ಸವದ ಅಂಗವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ಉತ್ತರ ಪ್ರಾಂತ ವತಿಯಿಂದ ಸೆ. 19ರಿಂದ 25ರವರೆಗೆ ರಾಜ್ಯದಲ್ಲಿ ಎರಡು ಮಾರ್ಗಗಳಲ್ಲಿ ರಥಯಾತ್ರೆ ಆಯೋಜಿಸಲಾಗಿದೆ ಎಂದು ಪ್ರಾಂತ ಕಾರ್ಯದರ್ಶಿ ಸಚಿನ ಕುಳಗೇರಿ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 19ರಂದು ಬೆಳಗ್ಗೆ 10 ಗಂಟೆಗೆ ಧಾರವಾಡ ಕೆಸಿಡಿ ಯಿಂದ ಚಾಲನೆ ಪಡೆಯುವ ಒಂದು ರಥಯಾತ್ರೆ ಬಳಿಕ ಹುಬ್ಬಳ್ಳಿಗೆ ಆಗಮಿಸಲಿದೆ. ಹುಬ್ಬಳ್ಳಿ ಜೆ.ಜಿ. ಕಾಲೇಜ್ನಲ್ಲಿ ಸಭಾ ಕಾರ್ಯಕ್ರಮ ನಡೆಸಲಾಗುವುದು. ಮುಂಡಗೋಡ, ಶಿರಸಿ, ಅಕ್ಕಿ ಆಲೂರು, ಹಾವೇರಿ, ಗದಗ, ಅಣ್ಣಿಗೇರಿ, ಕೊಪ್ಪಳ, ಬಳ್ಳಾರಿ, ಹೊಸಪೇಟೆ, ಗಂಗಾವತಿ, ಬಾಗಲಕೋಟ, ಗುಳೇದಗುಡ್ಡ, ಬದಾಮಿ, ರಾಮದುರ್ಗ, ಸವದತ್ತಿ, ಕಿತ್ತೂರ ಮಾರ್ಗವಾಗಿ ಸಂಚರಿಸಿ 25ರಂದು ಬೆಳಗಾವಿಯಲ್ಲಿ ಕೊನೆಗೊಳ್ಳಲಿದೆ ಎಂದರು.
ಇನ್ನೊಂದು ರಥಯಾತ್ರೆ ಬೀದರನಿಂದ ಆರಂಭಗೊಂಡು ಹಮನಾಬಾದ್, ಕಮಲಾಪುರ, ಕಲಬುರಗಿ, ಯಾದಗಿರಿ, ಸೇಡಂ, ಸುರುಪುರ, ತಾಳಿಕೋಟೆ, ಬಸವನಬಾಗೇವಾಡಿ, ಜಮಖಂಡಿ, ರಬಕವಿ ಬನಹಟ್ಟಿ, ಅಥಣಿ, ಹಾರೂಗೇರಿ, ಚಿಕ್ಕೋಡಿ, ಗೋಕಾಕ, ಬೈಲಹೊಂಗಲ ಮೂಲಕ ಬೆಳಗಾವಿಗೆ ಬಂದು ತಲುಪಲಿದೆ. ಎರಡು ರಥಯಾತ್ರೆಯು ಸುಮಾರು 2500 ಕಿ.ಮೀ. ಕ್ರಮಿಸಲಿದೆ. ಬೆಳಗಾವಿಯಲ್ಲಿ ಸೆ. 25ರಂದೇ ಸಮಾರೋಪ ಸಮಾರಂಭ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಭಿಷೇಕ ದೊಡಮನಿ, ದಾನೇಶ, ಸುಮಂಗಲಾ, ಸುಚೇತಾ ಇದ್ದರು.