ವಿವಿಗಳಲ್ಲಿ ಏಕರೂಪ ವೇಳಾಪಟ್ಟಿ ಜಾರಿಗೆ ಆಗ್ರಹ, ಎಬಿವಿಪಿ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿಯ ಸಭಾ ನಿರ್ಣಯ ಸರ್ಕಾರಕ್ಕೆ ಸಲ್ಲಿಸಲು ನಿರ್ಧಾರ

abvp
Published on

ಮಂಗಳೂರು: ವಿವಿಗಳಲ್ಲಿ ಏಕರೂಪ ವೇಳಾಪಟ್ಟಿ ಜಾರಿ, ಎಸ್‌ಸಿಪಿ ಹಾಗೂ ಎನ್‌ಪಿ ನಡುವಿನ ಗೊಂದಲ, ಯುಯುಸಿಎಂಎಸ್ ತಂತ್ರಾಂಶದ ಸಮರ್ಪಕ ಬಳಕೆ ಮತ್ತು ಕಾರ್ಯನಿರ್ವಹಣೆಯಲ್ಲಿನ ಲೋಪದೋಷ, ಕಾಲೇಜುಗಳಲ್ಲಿನ ಅಸಮರ್ಪಕ ಶುಲ್ಕ ಏರಿಕೆ, ಡ್ರಗ್ಸ್ ಮಾಫಿಯಾ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಎಬಿವಿಪಿ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸಭೆಯಲ್ಲಿ ಆಗ್ರಹಿಸಿದೆ.

ನಗರದ ಅಳಕೆ ಉಮಾಧಾಮ್ ಸಭಾಂಗಣದಲ್ಲಿ ಜರುಗಿದ ಎಬಿವಿಪಿ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸಭೆಯ ಸಮಾರೋಪದಲ್ಲಿ ಈಬಗ್ಗೆ ಸಮಗ್ರ ಚರ್ಚೆ ನಡೆದು ಸಭಾ ನಿರ್ಣಯ ಸರ್ಕಾರಕ್ಕೆ ಸಲ್ಲಿಸಲು ನಿರ್ಧಾರಿಸಲಾಗಿದೆ.

ಕರ್ನಾಟಕ ರಾಜ್ಯವು ಅನುಸರಿಸುವ ತನ್ನ ಶೈಕ್ಷಣಿಕ ನೀತಿಯ ಕುರಿತು ಸ್ಪಷ್ಟ ನಿಲುವನ್ನು ತೆಗೆದುಕೊಳ್ಳಬೇಕು. ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ರಾಷ್ಟ್ರೀಯ ರಾಜ್ಯ ಶಿಕ್ಷಣ ನೀತಿ ನಡುವಿನ ಗೊಂದಲಗಳನ್ನು ಪರಿಹರಿಸಬೇಕೆಂದು ವಿದ್ಯಾರ್ಥಿ ಪರಿಷತ್ ಆಗ್ರಹಿಸಿದೆ.

ರಾಜ್ಯದ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳಲ್ಲಿ ಏಕರೂಪ ವೇಳಾಪಟ್ಟಿ ಜಾರಿಯಲ್ಲಿ ಇರದ ಕಾರಣ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಾಕಷ್ಟು ತೊಡಕು ಉಂಟಾಗುತ್ತಿದೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಈ ವಿಷಯವಾಗಿ ಬೆಂಗಳೂರಿನಲ್ಲಿ ದುಂಡು ಮೇಜಿನ ಸಭೆ ನಡೆಸಿ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಿಗೆ ಮನವಿಯನ್ನು ಸಲ್ಲಿಸಿದ ಪರಿಣಾಮ ಉನ್ನತ ಶಿಕ್ಷಣ ಇಲಾಖೆ ಏಕರೂಪ ವೇಳಾಪಟ್ಟಿ ಅನುಸರಿಸುವಂತೆ ವಿಶ್ವವಿದ್ಯಾಲಯಗಳಿಗೆ ಮಾದರಿ ವೇಳಾಪಟ್ಟಿ ನೀಡಿದೆ. ಆದರೂ ಕೂಡ ಸಂಬಂಧಪಟ್ಟ ವಿಶ್ವ ವಿದ್ಯಾಲಯಗಳಲ್ಲಿನ ಕಾರ್ಯವೈಖರಿಯಲ್ಲಿ ಬದ್ಧತೆಯ ಕೊರತೆ ಕಾರಣ ಏಕರೂಪ ವೇಳಾಪಟ್ಟಿ ಅನುಸರಿಸಲು ಸಾಧ್ಯವಾಗಿರುವುದಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿ ಪರಿಷತ್ ಆಗ್ರಹಿಸಿದೆ.

ಎಬಿವಿಪಿ ರಾಜ್ಯ ಕಾರ್ಯದರ್ಶಿ ಪ್ರವೀಣ್‌ಕುಮಾರ್, ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ, ಎಬಿವಿಪಿ ಕರ್ನಾಟಕ ದಕ್ಷಿಣ ಪ್ರಾಂತ ಅಧ್ಯಕ್ಷ ಡಾ. ಸತೀಶ್, ಪ್ರಾಂತ ಕಾರ್ಯದರ್ಶಿ ಪ್ರವೀಣ್, ಪ್ರಾಂತ ಸಂಘಟನಾ ಕಾರ್ಯದರ್ಶಿ ಬಸವೇಶ್ ಕೋರಿ, ಎಬಿವಿಪಿ ದಕ್ಷಿಣ ಮಧ್ಯಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಶಿವಕುಮಾರ್, ಪ್ರಾಂತ ಸಹ ಸಂಘಟನಾ ಕಾರ್ಯದರ್ಶಿ ವೆಂಕಟೇಶ್ ದಾಂಗೆ ಸೇರಿದಂತೆ ಹಲವರು ಇದ್ದರು.

----------------------

ಎಬಿವಿಪಿ ಪ್ರಾಂತ ಕಾರ್ಯಕಾರಿಣಿಯ ಸಭಾ ನಿರ್ಣಯಗಳು

ಯುಯುಸಿಎಂಎಸ್ ತಂತ್ರಾಂಶದ ಸಮರ್ಪಕ ಬಳಕೆ ಮತ್ತು ಕಾರ್ಯನಿರ್ವಹಣೆಯಲ್ಲಿನ ಲೋಪದೋಷದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಗೆ ದಕ್ಕೆ, ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ನೇಮಕಾತಿ ಪರೀಕ್ಷೆಗಳಿಂದ ಗೊಂದಲಗಳು ಉಂಟಾಗದಂತೆ ಜರುಗಿಸಬೇಕು. ಕಾಲೇಜುಗಳಲ್ಲಿನ ಅಸಮರ್ಪಕ ಶುಲ್ಕ ಏರಿಕೆಗೆ ಪರಿಷತ್‌ನ ವಿರೋಧ, ನೆರೆಯ ರಾಜ್ಯಗಳಲ್ಲಿರುವಂತೆ ಕಾನೂನು ಪದವಿಗೆ ಸಾಮಾನ್ಯ ಪ್ರವೇಶಾತಿ ಪರೀಕ್ಷೆ ನಡೆಸಲು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಸಬೇಕು, ರಾಜ್ಯದ ಕಾನೂನು ಸುವ್ಯವಸ್ಥೆ ಮತ್ತು ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದೆ, ಈ ಕುರಿತಾಗಿ ಸರ್ಕಾರ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕು. ಶೈಕ್ಷಣಿಕ ಸಂಸ್ಥೆಗಳಲ್ಲಿ ಮಹಿಳಾ ಮತ್ತು ಮಕ್ಕಳ ಸುರಕ್ಷತೆಗೆ ಕ್ರಮ, ಎಲ್ಲಾ ಕಾಲೇಜುಗಳಲ್ಲಿ ಲೈಂಗಿಕ ಕಿರುಕುಳ ವಿರೋಧಿ ಘಟಕ ಸ್ಥಾಪನೆ ಕಡ್ಡಾಯ. ಡ್ರಗ್ಸ್‌ಗಳನ್ನು ಪೂರೈಸುವ ಮಾಫಿಯಗಳನ್ನು ರಾಜ್ಯದ ಪೊಲೀಸ್ ಇಲಾಖೆ ಭೇದಿಸಬೇಕು ಹಾಗೂ ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು, ಸೈಬರ್ ವಂಚನಾ ಜಾಲ, ರಾಜ್ಯ ಸರ್ಕಾರದ ಭ್ರಷ್ಟಾಚಾರ ವಿಚಾರಗಳು, ವಿದ್ಯಾರ್ಥಿಗಳು ಮತ್ತು ಯುವಜನತೆಯ ಆತ್ಮಹತ್ಯೆ ಪ್ರಕರಣಗಳ ಹೆಚ್ಚಳ, ಗುಡ್ಡ ಕುಸಿತ ಮತ್ತು ಮೈನಿಂಗ್,ರಾಜ್ಯ ಸರ್ಕಾರ ಈ ಕೂಡಲೇ ಗ್ಯಾರಂಟಿ ಯೋಜನೆಗಳನ್ನು ಅವುಗಳು ಉಪಲಬ್ಧಗಳನ್ನು ಕುಲಂಕುಶವಾಗಿ ಪರಿಶೀಲಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸರ್ಕಾರವನ್ನು ಆಗ್ರಹಿಸುವಂತೆ ವಿದ್ಯಾರ್ಥಿ ಪರಿಷತ್ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net