

ಮಂಗಳೂರು: ಒಂದೊಮ್ಮೆ ಭಾರತದಲ್ಲಿ ತಿರಂಗಾವನ್ನು ಸುಡುವಂತಹ ಪರಿಸ್ಥಿತಿ ಇತ್ತು. ಆದರೆ ಈಗ ದೇಶವಿರೋಧಿ ಮನೋಸ್ಥಿತಿ ಇರುವವರೂ ಪೌರತ್ವ ತಿದ್ದುಪಡಿ ಕಾಯ್ದೆ ಪ್ರತಿಭಟನೆ ವೇಳೆ ತಿರಂಗಾದೊಂದಿಗೆ ಭಾರತಕ್ಕೆ ಜೈಕಾರ ಹಾಕುವ ವಾತಾವರಣ ನಿರ್ಮಾಣ ಆಗಿರುವುದು ದೊಡ್ಡ ಬದಲಾವಣೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಷ್ಟ್ರೀಯ ಕಾರ್ಯದರ್ಶಿ ಹರ್ಷ ನಾರಾಯಣ ಹೇಳಿದರು.
ಮಂಗಳೂರಿನಲ್ಲಿ ನಡೆಯುತ್ತಿರುವ 39ನೇ ರಾಜ್ಯ ಸಮ್ಮೇಳನದ ಪ್ರಯುಕ್ತ ಶನಿವಾರ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಹಿಂದೆ ನಮ್ಮಲ್ಲಿ ನಕ್ಸಲ್ ಮನೋಧರ್ಮದವರು ನಮ್ಮ ರಾಷ್ಟ್ರಧ್ವಜವನ್ನು ಸುಡುವುದಕ್ಕೆ ಮುಂದಾದಾಗ, ಅದನ್ನು ಪ್ರತಿಭಟಿಸುವ ವೇಳೆ ನಕ್ಸಲರಿಂದ ಹತರಾಗಿದ್ದ ಸಾಮಾ ಜಗನ್ಮೋಹನ ರೆಡ್ಡಿಯವರ ಆತ್ಮವೀಗ ಸಿಎಎ ಪರ ಅಥವಾ ವಿರೋಧವಾಗಿ ದೇಶದುದ್ದಕ್ಕೂ ನಡೆದ ಪ್ರತಿಭಟನೆ, ಪ್ರದರ್ಶನಗಳಲ್ಲಿ ತ್ರಿವರ್ಣಧ್ವಜ ಹಾರಿರುವುದನ್ನು ನೋಡಿ ಸಮಾಧಾನಗೊಂಡಿರಬಹುದು ಎಂದರು.
ಭಾರತ ಮಾತೆಗೆ ರಕ್ತವನ್ನು ಅರ್ಪಣೆ ಮಾಡುವುದಾಗಿ ಹೇಳಿದ ಸ್ವಾತಂತ್ರೃ ಹೋರಾಟಗಾರ ಮದನ್‌ಲಾಲ್ ಧೀಂಗ್ರ ನಮಗೆ ಮಾದರಿಯಾದರೆ ಚೀನಾದ ಟಿಯನ್ಮನ್ ಸ್ಕ್ವೇರ್‌ನಲ್ಲಿ ವಿದ್ಯಾರ್ಥಿಗಳನ್ನು ಗುಂಡಿಟ್ಟು ಸಾಯಿಸಿದ ಆಡಳಿತದ ಮನೋಭಾವ ತುಕ್ಡೆ ಗ್ಯಾಂಗ್‌ಗಳದ್ದು ಎಂದರು.
ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ರದ್ದಾಗುವುದರ ಹಿಂದೆ ವಿದ್ಯಾರ್ಥಿ ಪರಿಷತ್ ಹಾಗೂ ಅದರ ಸಮಾನ ಮನಸ್ಕ ಸಂಘಟನೆಗಳ ಅನೇಕರ ತ್ಯಾಗ, ಶ್ಯಾಂ ಪ್ರಸಾದ್ ಮುಖರ್ಜಿಯವರ ಬಲಿದಾನವಿದೆ. ಗಂಡಸರಿದ್ದರೆ ಲಾಲ್‌ಚೌಕ್‌ದಲ್ಲಿ ತಿರಂಗ ಹಾರಿಸಿ ಎಂದಿದ್ದ ಕಾಶ್ಮೀರದ ಪ್ರತ್ಯೇಕತಾವಾದಿಗಳ ಮುಂದೆಯೇ ಈಗ ತಿರಂಗಾ ಹಾರಾಡುತ್ತಿದೆ ಎಂದರು.
ಕರ್ನಾಟಕ ಪ್ರಾಂತ ಎಬಿವಿಪಿ ಅಧ್ಯಕ್ಷ ಡಾ.ವೀರೇಶ್ ಬಾಳಿಕಾಯಿ, ಬೆಂಗಳೂರು ಪ್ರಾಂತ ಅಧ್ಯಕ್ಷ ಡಾ.ಸತೀಶ್, ಕರ್ನಾಟಕ ಪ್ರಾಂತ ಕಾರ್ಯದರ್ಶಿ ಪ್ರತೀಕ್ ಮಾಳಿ, ಬೆಂಗಳೂರು ಪ್ರಾಂತ ಕಾರ್ಯದರ್ಶಿ ಸೂರಜ್ ಪಂಡಿತ್, ಮುಖಂಡರಾದ ರೇವಣಸಿದ್ಧ ಜಾಡರ್, ಸಚಿನ್ ಹಿರೇಮಠ, ಮಂಗಳೂರು ನಗರ ಅಧ್ಯಕ್ಷ ಮಣಿಕಾಂತ ಕಳಸ, ಪ್ರೇಮಶ್ರೀ ಮಾತನಾಡಿದರು. ಶ್ರೀರಾಂ ಸ್ವಾಗತಿಸಿ ನಿರೂಪಿಸಿದರು. ಮಂಗಳೂರು ಮಹಾನಗರ ಅಧ್ಯಕ್ಷೆ ಭಾರತಿ ಪ್ರಭು ವಂದಿಸಿದರು.
ಮಂಗಳೂರು ಕಾಶ್ಮೀರವಾಗಲಿ
ಇತ್ತೀಚೆಗೆ ಸಿಎಎ ಪ್ರತಿಭಟನೆ ವೇಳೆ ಮಂಗಳೂರನ್ನು ಕಾಶ್ಮೀರ ಮಾಡುವುದಾಗಿ ಪ್ರತಿಭಟನಾಕಾರರು ಹೇಳಿದ್ದರು. ಮಂಗಳೂರು ಕಾಶ್ಮೀರವಾಗಲಿ, ಆದರೆ ಅದು ಹಿಂದಿನ ಕಾಶ್ಮೀರವಲ್ಲ, ಈಗಿರುವ ಪ್ರಗತಿಶೀಲ ಕಾಶ್ಮೀರವಾಗಲಿ. ದೇಶವೀಗ ಪರಿವರ್ತನೆಯ ಕಾಲಘಟ್ಟದಲ್ಲಿದೆ, ಒಳ್ಳೆಯ ವಾತಾವರಣ ನಿರ್ಮಾಣವಾಗುತ್ತಿದೆ. ಜನರಲ್ಲಿ ಎಬಿವಿಪಿ ಬಗ್ಗೆ ವಿಶ್ವಾಸ, ನಂಬಿಕೆ ಇದೆ, ಸರ್ಕಾರಗಳನ್ನು ಕಾಲಕಾಲದಲ್ಲಿ ಎಚ್ಚರಿಸುತ್ತಾ ದೇಶಾದ್ಯಂತ ರಚನಾತ್ಮಕ ಕಾರ್ಯ ಮಾಡಿರುವ ಪರಿಷತ್ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗಬೇಕಿದೆ ಎಂದು ಹರ್ಷ ನಾರಾಯಣ ಹೇಳಿದರು.