ವಿದ್ಯಾರ್ಥಿ ಸಂಘಟನೆಯಾಗಿ ಎಬಿವಿಪಿ ಕೆಲಸ: ಪ್ರಾಂತ ಸಹ ಸಂಘಟನಾ ಕಾರ್ಯದರ್ಶಿ ಗಂಗಾಧರ ಹಂಜಗಿ ಹೇಳಿಕೆ

ABVP Foundation Day Celebration Mandya
Published on

ಮಂಡ್ಯ: ಭಾರತದ ಸ್ವಾತಂತ್ರೃ ಹೋರಾಟದ ನಂತರ ಯುವಶಕ್ತಿಯನ್ನು ಒಂದುಗೂಡಿಸುವುದರ ಜತೆಗೆ ರಾಷ್ಟ್ರದ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಹಾಗೂ ಕಳೆದ 76 ವರ್ಷದಿಂದ ದೇಶದ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘಟನೆಯಾಗಿ ಎಬಿವಿಪಿ ಕಾರ್ಯನಿರ್ವಹಿಸುತ್ತಿದೆ ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ ಪ್ರಾಂತ ಸಹ ಸಂಘಟನಾ ಕಾರ್ಯದರ್ಶಿ ಗಂಗಾಧರ ಹಂಜಗಿ ಹೇಳಿದರು.

ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಎಬಿವಿಪಿ ಸಂಸ್ಥಾಪನ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರೀಯ ವಿದ್ಯಾರ್ಥಿ ದಿವಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1949 ಜು.9ರಂದು ಸ್ಥಾಪನೆಯಾದ ಎಬಿವಿಪಿ ಐಟಿಐ ನಿಂದ ಐಐಟಿವರೆಗೂ ಕಾರ್ಯಕರ್ತರ ತಂಡವಾಗಿ ಕಾರ್ಯ ನಿರ್ವಹಿಸುತ್ತಿದೆ. 1000ಕ್ಕೂ ಅಧಿಕ ಪೂರ್ಣಾವಧಿ ಕಾರ್ಯಕರ್ತರು ದೇಶಾದ್ಯಂತ ಕಾರ್ಯ ನಿರ್ವಹಿಸುತ್ತಿದ್ದಾರೆ. ದೇಶದ 4,362 ಶಾಖೆಗಳಲ್ಲಿ 4,540 ಸಂಪರ್ಕ ಸ್ಥಾನಗಳಲ್ಲಿ 59,30,940 ಸದಸ್ಯರನ್ನು ಒಳಗೊಂಡ ಸಂಘಟನೆಯಾಗಿದೆ. ತನ್ನ ಸುದೀರ್ಘ ಪಯಣದಲ್ಲಿ ಶೈಕ್ಷಣಿಕ ಕುಟುಂಬದ ಮೇಲೆ ನಂಬಿಕೆಯನ್ನು ಇಟ್ಟುಕೊಂಡು ವಿದ್ಯಾರ್ಥಿ, ಅಧ್ಯಾಪಕ, ಶಿಕ್ಷಣ ತಜ್ಞರು ಮತ್ತು ಆಡಳಿತ ಮಂಡಳಿಯನ್ನು ಒಗ್ಗೂಡಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ವಿಶಿಷ್ಟ ಸಂಘಟನೆಯಾಗಿ ಎಬಿವಿಪಿ ಹೊರಹೊಮ್ಮಿದೆ ಎಂದರು.

ವಿದ್ಯಾರ್ಥಿ ದೇಶದ ಜವಾಬ್ದಾರಿಯುತ ಪ್ರಜೆ ಎಂಬುದು ಪರಿಷತ್‌ನ ನಂಬಿಕೆ. ವಿದ್ಯಾರ್ಥಿಗಳು ರಾಷ್ಟ್ರೀಯ ಶಕ್ತಿ ಎಂದು ತೋರಿಸುವ ಕಾರ್ಯವನ್ನು ಎಬಿವಿಪಿ ಮಾಡುತ್ತಿದೆ. ಯಾವುದೇ ಸರ್ಕಾರಗಳು ವಿದ್ಯಾರ್ಥಿ ವಿರೋಧಿ ನೀತಿಗಳನ್ನ ಅನುಸರಿಸಿದಾಗ ಅದರ ವಿರುದ್ಧ ಹೋರಾಟ ಮಾಡಿ ನ್ಯಾಯ ಕೊಡಿಸುವ ಕಾರ್ಯ ಮಾಡಲಾಗುತ್ತಿದೆ. ಇತ್ತೀಚೆಗೆ ರಾಜ್ಯ ಸರ್ಕಾರ 9 ವಿಶ್ವವಿದ್ಯಾಲಯಗಳನ್ನು ಮುಚ್ಚಲು ಹೊರಟಿರುವ ಸಂದರ್ಭದಲ್ಲಿ ರಾಜ್ಯಾದ್ಯಂತ ವಿನೂತನ ಹೋರಾಟಗಳನ್ನು ಕೈಗೊಳ್ಳಲಾಯಿತು. ಇದಲ್ಲದೆ ವಿದ್ಯಾರ್ಥಿ ವೇತನ, ಸಿಇಟಿ ಹೋರಾಟ, ಹಾಸ್ಟೆಲ್ಗಳ ಸಮಸ್ಯೆಗಳ ಕುರಿತು, ಸರ್ಕಾರಿ ಕ್ಯಾಂಪಸ್‌ಗಳಲ್ಲಿ ಮೂಲ ಸೌಲಭ್ಯ, ವಿವಿಗಳಲ್ಲಿ ಏಕರೂಪದ ವೇಳಾಪಟ್ಟಿ ಜಾರಿ ಸೇರಿದಂತೆ ಹಲವು ಹೋರಾಟ ಮಾಡಲಾಗಿದೆ ಎಂದು ವಿವರಿಸಿದರು.

ಪರಿಷತ್ ರಚನಾತ್ಮಕ ದೃಷ್ಟಿಕೋನ ಇಟ್ಟುಕೊಂಡು ಹಲವಾರು ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕಾಗಿ ವ್ಯಕ್ತಿತ್ವ ವಿಕಸನ ಶಿಬಿರ, ಅಧ್ಯಯನ ಕೇಂದ್ರ, ರಕ್ತದಾನ ಶಿಬಿರ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ನೆರೆ ಪ್ರವಾಹದಂತದ ಸಂದರ್ಭದಲ್ಲಿ ಸೇವಾ ಚಟುವಟಿಕೆ, ಉಚಿತವಾಗಿ ಸಿಇಟಿ ಮತ್ತು ನೀಟ್ ತರಬೇತಿ ಶಿಬಿರ ಆಯೋಜಿಸಲಾಗುತ್ತಿದೆ. ಎಬಿವಿಪಿ ಕೇವಲ ಕಾರ್ಯಕ್ರಮ, ಹೋರಾಟಗಳಷ್ಟೇ ಅಲ್ಲದೆ ವಿದ್ಯಾರ್ಥಿಗಳ ಆಸಕ್ತಿಗೆ ತಕ್ಕಂತೆ ಹಲವಾರು ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಶಿವಾನಂದ, ವರದರಾಜು, ಚೇತಕ್, ಶಂಭುಲಿಂಗ, ಬಿ.ಎಸ್.ಅನುಪಮಾ, ತ್ರಿವೇಣಿ, ರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net