

ಉಡುಪಿ: ಖಾಸಗಿ ನರ್ಸಿಂಗ್ ಕಾಲೇಜಿನ ಶೌಚಾಲಯದಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು, ಹಿಂದು ವಿದ್ಯಾರ್ಥಿನಿಯ ವೀಡಿಯೋ ಚಿತ್ರೀಕರಿಸಿರುವ ಘಟನೆ ಖಂಡಿಸಿ ಅಜ್ಜರಕಾಡು ಹುತಾತ್ಮ ಸ್ಮಾರಕ ಭವನದ ಮುಂಭಾಗ ಗುರುವಾರ ಎಬಿವಿಪಿ ನಗರ ಘಟಕ ಆಶ್ರಯದಲ್ಲಿ ನೂರಾರು ವಿದ್ಯಾರ್ಥಿಗಳು ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೇ ಬೃಹತ್ ಪ್ರತಿಭಟನೆ ನಡೆಸಿದರು.
ನಗರ ಕಾರ್ಯದರ್ಶಿ ಸುಮುಖ ಭಟ್ ಮಾತನಾಡಿ, ಆರಂಭದಲ್ಲಿ ಪ್ರಕರಣದ ದಿಕ್ಕು ತಪ್ಪಿಸಿದ ಮಲ್ಪೆ ವೃತ್ತನಿರಿಕ್ಷಕರನ್ನು ಅಮಾನತುಗೊಳಿಸಿ, ತನಿಖಾಧಿಕಾರಿಯನ್ನು ಬದಲಾಯಿಸಬೇಕೆಂದು ಆಗ್ರಹಿಸಿದರು. ಜಿಲ್ಲಾ ಪೋಲಿಸ್ ವರಿಷ್ಠ್ಠಾಧಿಕಾರಿ ಅಕ್ಷಯ್ ಹಾಕೆ ಮಚ್ಚೀಂದ್ರ ಮತ್ತು ತನಿಖಾಧಿಕಾರಿಯವರು ಸ್ಥಳಕ್ಕೆ ಬರಬೇಕೆಂದು ಪಟ್ಟುಹಿಡಿದರು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೋಲಿಸರ ಜೊತೆ ತಳ್ಳಾಟ ನಡೆಯಿತು.
ಲಾಠಿ ಚಾರ್ಚ್ ತಡೆದ ಶಾಸಕರು
ಪೋಲಿಸ್ ಹಾಗು ಎಬಿವಿಪಿಯ ವಿದ್ಯಾರ್ಥಿಗಳ ಜೊತೆ ವಾಗ್ವಾದ ನಡೆದು, ಪೋಲಿಸರು ಲಾಠಿ ಚಾರ್ಚ್ ಮಾಡಲು ಮುಂದಾದ ಸಂದರ್ಭದಲ್ಲಿ ಮಧ್ಯಪ್ರವೇಶ ಮಾಡಿದ ಶಾಸಕ ಯಶ್ಪಾಲ್ ಸುವರ್ಣ ತಾವೇ ಸ್ವತ@ ಮುಂದೆ ನಿಂತು ಪೋಲಿಸರಿಗೆ ಲಾಠಿ ಚಾರ್ಚ್ ಮಾಡದಂತೆ ಎಚ್ಚರಿಕೆ ನೀಡಿದರು.
ಸ್ಥಳಕ್ಕೆ ಆಗಮಿಸಿದ ಎಸ್ಪಿ
ವಿದ್ಯಾರ್ಥಿಗಳ ಪಟ್ಟಿಗೆ ಮಣಿದು ಸ್ಥಳಕ್ಕೆ ಆಗಮಿಸಿದ ಎಸ್ಪಿ ಅಕ್ಷಯ್ ಹಾಕೆ ಮಚ್ಚೀಂದ್ರ ಸುಮಾರು 20 ನಿಮಿಷ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ತನಿಖಾಧಿಕಾರಿಯನ್ನು ಈಗಾಗಲೇ ಬದಲಾವಣೆ ಮಾಡಲಾಗಿದೆ. ವಿಶೇಷ ತಂಡವನ್ನು ರಚಿಸಲಾಗಿದೆ. ಆರಂಭಿಕ ತನಿಖಾಧಿಕಾರಿಯನ್ನು ಅಮಾನತು ಮಾಡುವ ಬಗ್ಗೆ ಪರಿಶೀಲಿಸಿ, ಕಾನೂನು ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ವಶಕ್ಕೆ ಪಡೆದ ಮೊಬೈಲ್ ಗಳನ್ನು ಎಫ್.ಎಸ್.ಎಲ್ ಗೆ ಕಳುಹಿಸಲಾಗಿದ್ದು, ಪ್ರಕರಣದ ತನಿಖೆಯ ವೇಳೆ ಮತ್ತಷ್ಟು ಮೊಬೈಲ್ ಗಳು ಪತ್ತೆಯಾದಲ್ಲಿ ಅವುಗಳನ್ನೂ ಎಫ್.ಎಸ್.ಎಲ್ ಗೆ ಕಳುಹಿಸುತ್ತೇವೆ ಎಂದರು.
ಪ್ರತಿಭಟನಾ ಸ್ಥಳದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸುಮಾರು 200 ಕ್ಕೂ ಹೆಚ್ಚು ಪೋಲಿಸರು, ಹೆಚ್ಚುವರಿ ಎಸ್ಪಿ ಸಿದ್ದಲಿಂಗಪ್ಪ, ಉಡುಪಿ ಡಿವೈಎಸ್ಪಿ ದಿನಕರ್, ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಸೇರಿದಂತೆ ಪಿ.ಎಸ್.ಐ ಗಳ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.