ಡ್ರಗ್ಸ್ ವಿರುದ್ಧ ಮೈಸೂರಿನಲ್ಲಿ ಎಬಿವಿಪಿ ಜಾಗೃತಿ ಅಭಿಯಾನ

ABVP awareness campaign against drugs in Mysore
Published on

ಮೈಸೂರು: ಡ್ರಗ್ಸ್ ಮಾಫಿಯಾ, ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟದ ಕುರಿತು ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಿಂದ ನಗರದಲ್ಲಿ ಮಂಗಳವಾರ ಜಾಗೃತಿ ಅಭಿಯಾನ ನಡೆಯಿತು.

ಜಾಥಾ ನಡೆಸುವ ಮೂಲಕ ಜಾಗೃತಿ ಮೂಡಿಸಲು ಎಬಿವಿಪಿ ಕಾರ್ಯಕರ್ತರು ಮುಂದಾಗಿದ್ದರು. ಆದರೆ, ಪೊಲೀಸರಿಂದ ಅನುಮತಿ ದೊರೆಯದ ಹಿನ್ನೆಲೆಯಲ್ಲಿ ಗನ್‌ಹೌಸ್ ವೃತ್ತದ ಬಳಿ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭ ವಿದ್ಯಾರ್ಥಿಗಳು ವಿವಿಧ ಘೋಷಣೆ ಗಳನ್ನು ಕೂಗಿದರು. ಡ್ರಗ್ಸ್ ಮಾಫಿಯ ತಡೆಯಲು ಸರ್ಕಾರ ವಿಫಲವಾಗಿದೆ ಎಂದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭ ಮಾತನಾಡಿದ ಎಬಿವಿಪಿ ರಾಜ್ಯ ಕಾರ್ಯದರ್ಶಿ ಎಚ್.ಕೆ. ಪ್ರವೀಣ್, ನಗರದಲ್ಲಿ ಪತ್ತೆಯಾಗಿರುವ ಡ್ರಗ್ಸ್ ಫ್ಯಾಕ್ಟರಿ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು, ಕಾನೂನು ಸುವ್ಯವಸ್ಥೆ ಮತ್ತು ಗುಪ್ತಚರ ವೈಫಲ್ಯಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಎನ್‌ಡಿಪಿಎಸ್ ಮತ್ತು ಕೋಪ್ಟಾ ಕಾಯ್ದೆಗಳನ್ನು ಬಲಪಡಿಸುವಲ್ಲಿ ಕಾಯ್ದೆಗೆ ಪ್ರಮುಖಕ ತಿದ್ದುಪಡಿಗಳನ್ನು ಮಾಡಬೇಕು, ಡ್ರಗ್ಸ್ ಮಾಫಿಯವನ್ನು ಸಂಪೂರ್ಣ ನಿರ್ಮೂಲನೆ ಮಾಡಬೇಕು, ಮಾದಕ ವ್ಯಸನಿಗಳ ಪುನರ್ವಸತಿ ಕೇಂದ್ರಗಳನ್ನು ಹೆಚ್ಚಿಸಬೇಕು ಹಾಗೂ ಯುವಜನರಲ್ಲಿ ಜಾಗೃತಿ ಮೂಡಿಸಬೇಕು, ಸಿವಿಲ್ ಠಾಣೆಗಳಲ್ಲಿ ದಾಖಲಾಗುವ ಡ್ರಗ್ಸ್ ಪ್ರಕರಣಗಳ ಮೇಲ್ವಿಚಾರಣೆಗೆ ಸರ್ಕಾರ ರಚಿಸಿರುವ ಎಎನ್‌ಟಿಎಫ್ ತಂಡವು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸಂಪೂರ್ಣ ಸ್ವಾತಂತ್ರೃ ನೀಡಬೇಕು ಮತ್ತು ಟಾಸ್ಕ್‌ಫೋರ್ಸ್ ರಚನೆಯ ಉದ್ದೇಶ ಸಫಲತೆಯನ್ನು ಖಚಿತಪಡಿಸಬೇಕು ಎಂದು ಆಗ್ರಹಿಸಿದರು.

ಎಬಿವಿಪಿ ಈಗಾಗಲೇ ಡ್ರಗ್ಸ್ ಮಾಫಿಯದ ವಿರುದ್ಧ ರಾಜ್ಯಾದ್ಯಂತ ‘ನಶೆ ಮುಕ್ತ ಕ್ಯಾಂಪಸ್’ ಅಭಿಯಾನ ನಡೆಸಿದೆ. ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗದೆ ದೇಶದ ಭವಿಷ್ಯ ರೂಪಿಸುವ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ಎಂದು ಕರೆ ನೀಡಿದರು. ಈ ಸಂದರ್ಭ ಎಬಿವಿಪಿ ಪ್ರಮುಖರಾದ ಪ್ರಜ್ವಲ್, ಗುರು, ಮಂದಾರಾ, ವಸಂತ, ಸಂಜಿತ್ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net