

ವಿಜಯಪುರ: ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಬಳಕೆ ನಿಷೇಧಿಸಲು ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಹುಕ್ಕಾ ಬಾರ್‌ಗಳ ಸಂಖ್ಯೆ ಹೆಚ್ಚುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಮಾರಾಟ ಮತ್ತು ಬಳಕೆ ಪ್ರಮಾಣ ಹೆಚ್ಚಿದೆ. ಈಗಾಗಲೇ ಸರ್ಕಾರ ಇಂಥ ಹುಕ್ಕಾ ಬಾರ್ ನಿಷೇಧಕ್ಕೆ ಮುಂದಾಗಿರುವ ಮಾಹಿತಿ ಇದ್ದು, ಎಬಿವಿಪಿ ಸಂಘಟನೆ ಇಂಥ ನಿರ್ಧಾವರನ್ನು ಸ್ವಾಗತಿಸಲಿದೆ. ರಾಜ್ಯದಲ್ಲಿ ಯುವ ಪಡೆ ಮಾದಕ ಪದಾರ್ಥಗಳಿಗೆ ದಾಸರಾಗಿ ಬದುಕು ಕಳೆದುಕೊಳ್ಳುವ ಮುನ್ನವೇ ಸರ್ಕಾರ ನಿಷೇಧ ಹೇರಬೇಕೆಂದು ಆಗ್ರಹಿಸಿದರು.
ಹುಕ್ಕಾ ನಿಷೇಧ ಕ್ರಮ ಸಮರ್ಪಕವಾಗಿ ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕಿದೆ. ವಿಶೇಷವಾಗಿ ಯುವ ವಯಸ್ಕರಿಗೆ, ಹುಕ್ಕಾ ಧೂಮಪಾನದ ಅಪಾಯಗಳು ಮತ್ತು ಮುಂಬರುವ ನಿಷೇಧದ ಬಗ್ಗೆ ಅರಿವು ಮೂಡಿಸಲು ಸಮಗ್ರ ಜಾಗೃತಿ ಅಭಿಯಾನ ನಡೆಸಬೇಕಿದೆ. ನಿಯಮಿತವಾಗಿ ತಪಾಸಣೆ ಮತ್ತು ಉಲ್ಲಂಘಿಸುವವರಿಗೆ ದಂಡ ಸೇರಿದಂತೆ ನಿಷೇಧದ ಕಟ್ಟುನಿಟ್ಟಾದ ಅನುಸರಣೆಗೆ ಕಠಿಣ ಕಾನೂನು ಕ್ರಮಗಳನ್ನು ರೂಪಿಸಬೇಕಿದೆ. ಹುಕ್ಕಾ ಧೂಮಪಾನವನ್ನು ತ್ಯಜಿಸಲು ಸಹಕಾರಿಯಾಗುವಂತೆ ನೂರಿತ ವೈದ್ಯರಿಂದ ಮತ್ತು ತಜ್ಞರಿಂದ ಸಮಾಲೋಚನೆ ಕಾರ್ಯಕ್ರಮಗಳನ್ನು ರೂಪಿಸಬೇಕು. ಆಗಾಗಮೇಲ್ವಿಚಾರಣೆ ನಡೆಸಬೇಕು. ಶಿಕ್ಷಣ ಸಂಸ್ಥೆಗಳು, ಆರೋಗ್ಯ ಸಂಸ್ಥೆಗಳು ಮತ್ತು ವಿದ್ಯಾರ್ಥಿ ಸಂಘಟನೆಗಳೊಂದಿಗೆ ಸಹಯೋಗದಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕೆಂದು ಒತ್ತಾಯಿಸಿದರು.
ಮುಖಂಡರಾದ ಸಚಿನ ಕುಳಗೇರಿ, ಸಿದ್ದು ಪತ್ತಾರ, ಸುರೇಖಾ ಕುಲಕರ್ಣಿ, ಮಹಂತೇಶ ಕಂಬಾರ, ಸಂದೀಪ ಅಳಗುಂಡಿ, ಅಭಿಷೇಕ ಬಿರಾದಾರ, ಬಾಲಾಜಿ ಬಿರಾದಾರ, ವಿಕ್ರಮ ರಾಠೋಡ, ರಿಯಾಜ ಜಮಾದಾರ ಮತ್ತಿತರರಿದ್ದರು.