ಸರ್ಕಾರದ ನಿರ್ಧಾರ ಖಂಡಿಸಿ ಎಬಿವಿಪಿ ಪ್ರತಿಭಟನೆ

ABVP
Published on

ಕುಶಾಲನಗರ:

ಜಿಲ್ಲೆಯ ಅಸ್ಮಿತೆ ಆಗಿರುವ ಕೊಡಗು ವಿಶ್ವವಿದ್ಯಾಲಯ ಮುಚ್ಚಲು ನಿರ್ಧರಿಸಿರುವ ಸರಕಾರದ ಕ್ರಮ ಖಂಡಿಸಿ ಎಬಿವಿಪಿ ವತಿಯಿಂದ ಕುಶಾಲನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು. ವಿವಿಧ ಕಾಲೇಜುಗಳಿಂದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಮೆರವಣಿಗೆ ಮೂಲಕ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತಕ್ಕೆ ಆಗಮಿಸಿ ರಾಜ್ಯ ಸÀರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೊಡಗು ವಿವಿಯನ್ನು ಯಾವುದೇ ಕಾರಣಕ್ಕೂ ಮುಚ್ಚದಂತೆ ಆಗ್ರಹಿಸಿದರಲ್ಲದೆ ಸರ್ಕಾರ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಾನವ ಸರಪಳಿ ರಚಿಸಿ ಕೆಲಕಾಲ ರಸ್ತೆ ತಡೆ ನಡೆಸಿದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಎಬಿವಿಪಿ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್, ರಾಜ್ಯ ಸರ್ಕಾರ ವಿದ್ಯಾರ್ಥಿ ವಿರೋಧಿ ನೀತಿ ಅನುಸರಿಸುತ್ತಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಬದಲಾಗಿ ಅನಾನುಕೂಲ ಉಂಟುಮಾಡುವ ನಿರ್ಧಾರ ಕೈಗೊಳ್ಳುತ್ತಿರುವುದು ಖಂಡನೀಯ. ಸ್ವಾತಂತ್ರ‍್ಯಾ ನಂತರ ಕೊಡಗಿಗೆ ಪ್ರಥಮವಾಗಿ ದಕ್ಕಿರುವ ವಿವಿಯನ್ನು ಮುಚ್ಚುವ ನಿರ್ಧಾರದ ಮೂಲಕ ಕೊಡಗಿನ ಜನತೆಗೆ ಅನ್ಯಾಯವೆಸಗಲು ಮುಂದಾಗಿದೆ. ಹಣಕಾಸಿನ ಕೊರತೆ ಕಾರಣ ನೀಡಿ ವಿವಿಗಳನ್ನು ಮುಚ್ಚಲು ಹೊರಟಿರುವ ಸÀರ್ಕಾರದ ನಿರ್ಧಾರ ಸರಿಯಲ್ಲ. ಆಂತರಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಸಮರ್ಪಕವಾಗಿ ಮುನ್ನಡೆಯುತ್ತಿರುವ ಕೊಡಗು ವಿವಿ ಮುಚ್ಚುವ ನಿರ್ಧಾರ ಹಿಂತೆಗೆದುಕೊಳ್ಳಬೇಕು. ಉಚಿತ ಯೋಜನೆಗಳಿಗೆ ಹಣ ನೀಡುವ ಸÀರ್ಕಾರ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಹಣ ಒದಗಿಸಲು ಆಗದೆ ಇದ್ದಲ್ಲಿ ವಿದ್ಯಾರ್ಥಿಗಳು ಭಿಕ್ಷೆ ಬೇಡಿ ಹಣ ಸಂಗ್ರಹಿಸಿ ಸÀರ್ಕಾರಕ್ಕೆ ನೀಡಲು ಸಿದ್ದರಿದ್ದೇವೆ ಎಂದರು.

ಪ್ರತಿಭಟನೆಯಲ್ಲಿ ಎಬಿವಿಪಿ ಜಿಲ್ಲಾ ಸಂಚಾಲಕ ರೋಹಿತ್, ತಾಲೂಕು ಸಂಚಾಲಕ ಗಂಧರ್ವ, ಪ್ರಮುಖರಾದ ಪ್ರಮೋದ್, ಲಯನ್, ಪವನ್, ಬಿಪಿನ್, ಸ್ಥಳೀಯ ಕನ್ನಡಭಾರತಿ, ಅನುಗ್ರಹ, ವಿವೇಕಾನಂದ, ಸÀರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net