

ಚಿತ್ರದುರ್ಗ: ಹೆದ್ದಾರಿಯಲ್ಲಿ ಬೈಕ್ ಮೇಲೆ ತೆರಳುತ್ತಿದ್ದ ಯುವಕರನ್ನು ಮುಂಗಳಮುಖಿಯರ ತಂಡವೊಂದು ಅಡ್ಡಗಟ್ಟಿ, ಅವರ ಮೇಲೆ ಮನಸೋ ಇಚ್ಚೆ ಹಲ್ಲೆ ನಡೆಸಿರುವ ಘಟನೆ ಚಿತ್ರದುರ್ಗ ಹೊರವಲಯದ ರಾ.ಹೆ 4 ರ ಬಳಿ ಕಾತ್ರಾಳ್ ಕೆರೆ ಸಮೀಪ ನಡೆದಿದೆ.
ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಘಟನೆಯಲ್ಲಿ ಮಾಳಪ್ಪನಹಟ್ಟಿಯ ಅನಿಲ್, ಲಕ್ಕಪ್ಪಗೆ ಗಂಭೀರ ಗಾಯಗಳಾಗಿವೆ. ಕಳೆದ ಗುರುವಾರ ರಾತ್ರಿ ಘಟನೆ ನಡೆದಿದ್ದು, ಗಾಯಾಳುಗಳು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಯುವಕರು ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ ಬೈಕ್ ಅಡ್ಡಗಟ್ಟಿ ಸವಾರರ ಮೇಲೆ ನಾಲ್ಕೈದು ಮಂದಿ ಮಂಗಳಮುಖಿಯರಿಂದ ಹಲ್ಲೆ ನಡೆದಿದೆ. ಬೈಕ್ ಅಡ್ಡಗಟ್ಟಿ ದರೋಡೆ ಮಾಡಿದ್ದಾರೆ, 20 ಸಾವಿರ ನಗದು, ಚೈನ್ ದೋಚಿದ್ದಾರೆಂದು ಹಲ್ಲೆಗೊಳಗಾದ ಬೈಕ್ ಸವಾರರು ಆರೋಪ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವಿಡಿಯೋ ಒಂದು ಹರಿದಾಡುತ್ತಿದೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.