ಅಹಿಂದ ಹೆಸರಲ್ಲಿ ಅಧಿಕಾರ ದುರ್ಬಳಕೆ

BJP
Published on

ಕೋಲಾರ: ಕಾಂಗ್ರೆಸ್​ ಸರ್ಕಾರದ ಭ್ರಷ್ಟಾಚಾರ, ಮುಸ್ಲಿಮರ ತುಷ್ಟೀಕರಣ, ಹಾಲು, ವಿದ್ಯುತ್​, ಪ್ರಯಾಣ, ಮುದ್ರಾಂಕ ದರ ಏರಿಕೆ, ಪರಿಶಿಷ್ಟರ ಹಣ ದುರ್ಬಳಕೆ ಖಂಡಿಸಿ ಏ.2ರಂದು ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯಿಂದ 1,500 ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಮಾಜಿ ಸಂಸದ ಎಸ್​.ಮುನಿಸ್ವಾಮಿ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿಭಟನೆಯಲ್ಲಿ ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್​.ಅಶೋಕ್​, ಛಲವಾದಿ ನಾರಾಯಣಸ್ವಾಮಿ ಸೇರಿ ಇತರರು ನೇತೃತ್ವ ವಹಿಸಲಿದ್ದಾರೆ ಎಂದು ತಿಳಿಸಿದರು.

ಅಹಿಂದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ದಲಿತರ ಅಭಿವೃದ್ಧಿಗೆ ಮೀಸಲಾಗಿದ್ದ

ಎಸ್​ಸಿಎಸ್​ಪಿ, ಟಿಎಸ್​ಪಿಯ 38 ಸಾವಿರ ಕೋಟಿ ರೂ. ಅನುದಾನವನ್ನು ಪಂಚ ಗ್ಯಾರಂಟಿ ಹಾಗೂ ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ದುರ್ಬಳಕೆ ಮಾಡಿಕೊಂಡು ಹಿಂದುಳಿದವರು, ದಲಿತರನ್ನು ವಂಚಿಸಿದ್ದಾರೆ. ಅಧಿಕಾರದಲ್ಲಿರಲು ನೈತಿಕತೆ ಕಳೆದುಕೊಂಡಿರುವ ಸಿಎಂ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ರೈತರ ಪರ ಎಂದಿರುವ ಕಾಂಗ್ರೆಸ್​ ಹಾಲು ಉತ್ಪಾದಕರಿಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ಸ್ಥಗಿತಗೊಳಿಸಿದೆ. 3 ಬಾರಿ ಹಾಲಿನ ದರವನ್ನು ಒಟ್ಟಾರೆಯಾಗಿ 9 ರೂ. ಏರಿಕೆ ಮಾಡಿದ್ದಾರೆ. ಇದರಲ್ಲಿ ಕನಿಷ್ಠ ಶೇ.25ರಷ್ಟನ್ನಾದರೂ ರೈತರಿಗೆ ನೀಡಿದ್ದರೆ ಎಷ್ಟೋ ಸಂತೃಪ್ತರಾಗುತ್ತಿದ್ದರು ಎಂದರು.

ದೇವಾಲಯದ ಹುಂಡಿ ಹಣವನ್ನೂ ಬಿಡದಂತೆ ಇಡೀ ರಾಜ್ಯವನ್ನು ಲೂಟಿ ಮಾಡಲಾಗುತ್ತಿದೆ. ಅರ್ಚಕರಿಗೆ ಗೌರವಧನ ಏರಿಕೆ ಮಾಡದೆ ಮಸೀದಿ, ಮದರಸಾಗಳ ಮೌಲ್ವಿಗಳಿಗೆ ಗೌರವಧನ ಏರಿಕೆ ಮಾಡಿದ್ದಾರೆ. ದೇವಾಲಯಗಳ, ರೈತರ ಜಮೀನು ಕಬಳಿಸುವ ಸೂಪರ್​ ಸಿಎಂ, ಸಚಿವ ಜಮೀರ್​ ಅಹ್ಮದ್​, ಸಿಎಂ ರಾಜಕೀಯ ಸಲಹೆಗಾರ ನಸೀರ್​ ಅಹ್ಮದ್​, ಮೈಸೂರಿನ ತನ್ವಿರ್​ ಸೇಠ್​ ಇವರೆಲ್ಲ ಸಿದ್ದರಾಮಯ್ಯನವರಿಗೆ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.

ರಸ್ತೆಗಳಲ್ಲಿ ನಮಾಜ್​ ಮಾಡಬಾರದು ಎಂದು ನ್ಯಾಯಾಲಯದ ಸೂಚನೆ ಇದ್ದರೂ ರ್ನಿಲಕ್ಷಿಸಿ ರಸ್ತೆಗಳಲ್ಲಿ ನಮಾಜ್​ ಮಾಡಿಸಿದ್ದಾರೆ. ಬೈಕ್​ಗಳಲ್ಲಿ ಲಾಂಗ್​ ಹಿಡಿದು ವೀಲಿಂಗ್​ ಮಾಡುವುದು, ಠಾಣೆಗೆ ನುಗ್ಗಿ ಪೊಲೀಸರ ಮೇಲೆ ಹಲ್ಲೆ ಮಾಡುವುದು, ಕ್ರಿಕೆಟ್​ ಬೆಟ್ಟಿಂಗ್​ ಆಡಿಸುವುದು, ಲವ್​ ಜಿಹಾದ್​ ಮೂಲಕ ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತಿರುವ ಘಟನೆಗಳು ಹೆಚ್ಚುತ್ತಿವೆ ಎಂದು ದೂರಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಸಂವಿಧಾನ ಬದಲಾಯಿಸುವುದಾಗಿ ಹೇಳಿಕೆ ನೀಡಿರುವುದು ಖಂಡನೀಯ. ಕೂಡಲೇ ಅವರು ರಾಜೀನಾಮೆ ನೀಡಬೇಕು. 1.60 ಲಕ್ಷ ಕೋಟಿ ಸಾಲದ ಹೊರೆ ರಾಜ್ಯದ ಮೇಲಿದೆ. ಈ ಸರ್ಕಾರ ಪಾಪದ ಸರ್ಕಾರ, ಜನರ ರಕ್ತ ಹೀರುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ, ಮುಸ್ಲಿಮರ ತುಷ್ಟೀಕರಣದ ಆದೇಶದ ಪ್ರತಿ ಹರಿದಿದ್ದಕ್ಕೆ 18 ಶಾಸಕರನ್ನು ಸಭಾಧ್ಯಕ್ಷ ಖಾದರ್​ ಅಮಾನತು ಮಾಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಮುನಿಸ್ವಾಮಿ, ಹಿಂದೆ ಬಿಜೆಪಿ ಆಡಳಿತದಲ್ಲಿ ಸಭಾಪತಿಗಳನ್ನು ಕಾಂಗ್ರೆಸ್​ನವರು ಇವರು ಹೇಗೆ ನಡೆಸಿಕೊಂಡಿದ್ದಾರೆ ಎಂದು ಇತಿಹಾಸ ನೋಡಲಿ ಎಂದರು.

ಬೆಲೆ ಹೆಚ್ಚಿಸಿ ಜನರ ರಕ್ತ ಹೀರುವ ಸರ್ಕಾರ

ಕರ್ನಾಟಕದಲ್ಲಿ ದುಬಾರಿ ಜೀವನ ನಡೆಸುವ ದುಸ್ಥಿತಿ ನಿಮಾರ್ಣ ಮಾಡಲಾಗಿದೆ. ಗಾಳಿಯನ್ನು ಹೊರತುಪಡಿಸಿ ಉಳಿದೆಲ್ಲ ವಸ್ತುಗಳ ಬೆಲೆಗಳನ್ನು ಗಗನಕ್ಕೇರಿಸಿ ಜನರ ರಕ್ತ ಹೀರುತ್ತಿದ್ದು, ಈ ಸರ್ಕಾರಕ್ಕೆ ಜನರ ಶಾಪ ತಟ್ಟಲಿದೆ. ಅಸಮರ್ಥ ನಾಯಕ ಸಿದ್ದರಾಮಯ್ಯ ರಾಜ್ಯಕ್ಕೆ ಶಾಪವಾಗಿ ಕಾಡುತ್ತಿದ್ದಾರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂಶಕ್ತಿ ಚಲಪತಿ ಲೇವಡಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net