

ವಿಜಯವಾಣಿ ಸುದ್ದಿಜಾಲ ಕುಣಿಗಲ್
ತಾಲೂಕು ಒಕ್ಕಲಿಗ ಸಂಘದ ಹೊಸ ಸದಸ್ಯತ್ವಕ್ಕೆ ಆಗ್ರಹಿಸಿ ಸಮುದಾಯದ ಜನರು ಪಟ್ಟಣದ ಜ್ಞಾನ ಭಾರತಿ ಕಾಲೇಜು ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿದರು.
ಸಂಘದ ಸದಸ್ಯ ಯಡವಾಣಿ ವೆ.ಎಸ್.ಅರುಣ್ಕುಮಾರ್ ಮಾತನಾಡಿ, ಮಾಜಿ ಸಚಿವ ಎನ್.ಹುಚ್ಚಮಾಸ್ತಿಗೌಡ, ಅಂದಾನಯ್ಯ, ಹೇರೂರು ಗೋವಿಂದಯ್ಯ ಮೊದಲಾದ ಸಮುದಾಯದ ಮುಖಂಡರು ತಾಲೂಕು ಒಕ್ಕಲಿಗ ಸಂ ಕಟ್ಟಿ ಬೆಳೆಸಿದ್ದಾರೆ. ಆದರೆ, ಈಗಿನ ಆಡಳಿತ ಚುಕ್ಕಾಣಿ ಹಿಡಿದಿರುವವರು ಸಂಘವನ್ನು ಸ್ವಾರ್ಥಕ್ಕೆ ಬಳಸಿಕೊಂಡು ಕುಟುಂಬದವರಿಗೆ ಸದಸ್ಯತ್ವ ನೀಡುವ ಮೂಲಕ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ತಾಲೂಕು ಒಕ್ಕಲಿಗ ಸಂಘದಲ್ಲಿ ಕೆಲವ್ಯಕ್ತಿಗಳು ಗುಂಪು ಕಟ್ಟಿಕೊಂಡು ಕಳೆದ 25 ವರ್ಷಗಳಿಂದ ಸರ್ವಸದಸ್ಯರ ಸಭೆ ನಡೆಸದೆ ಕಾನೂನುಬಾಹಿರವಾಗಿ ಆಡಳಿತ ಮಂಡಳಿ ರಚಿಸಿಕೊಂಡು, ಸಂದಲ್ಲಿ ಲೂಟಿ ಮಾಡುತ್ತಿದ್ದಾರೆ ಎಂದು ಹೆಸರು ಪ್ರಸ್ತಾಪಿಸದೆ ಸಂಘದ ಅಧ್ಯಕ್ಷ ಬಿ.ಬಿ.ರಾಮಸ್ವಾಮಿಗೌಡ ವಿರುದ್ಧ ಆರೋಪಿಸಿದರು.
ಕೆಲವರು 25 ವರ್ಷಗಳಿಂದ ಹಣ ಮಾಡಿಕೊಳ್ಳಲು ಒಕ್ಕಲಿಗ ಸಂಘವನ್ನು ದಾರಿ ಮಾಡಿಕೊಂಡಿದ್ದಾರೆ. ಪ್ರತಿವರ್ಷ ವಾರ್ಷಿಕ ಸಭೆ ಕರೆಯಲಾಗುತ್ತಿದೆ ಎಂದು ಡಿ.ಆರ್.ಅವರಿಗೆ ನಕಲಿ ದಾಖಲೆ ಕೊಡುತ್ತಾ ಬರುತ್ತಿದ್ದಾರೆ. ಸಂಘ ಸ್ಥಾಪನೆ ಆದಾಗಿನಿಂದಲೂ ಎರಡು ವರ್ಷಕ್ಕೊಮ್ಮೆ ಆಡಳಿತ ಮಂಡಳಿಗೆ ಚುನಾವಣೆ ನಡೆಸಬೇಕೆಂದು ಬೈಲಾದಲ್ಲಿ ದಾಖಲಾಗಿದೆ. ಆದರೆ, ಈಗ ಬೈಲಾ ತಿದ್ದು ಪಡಿಮಾಡಿಕೊಂಡು, 5 ವರ್ಷಕ್ಕೆ ಚುನಾವಣೆ ಮಾಡಿಕೊಂಡಿದ್ದಾರೆ. ಇದು ಕಾನೂನು ಬಾಹಿರ. ಯಾವುದೇ ಬೈಲಾ ತಿದ್ದುಪಡಿ ಮಾಡಲು ಸರ್ವಸದಸ್ಯರ ಸಮ್ಮುಖದಲ್ಲಿ ಒಮ್ಮತ ಬೇಕು. ಆದರೆ, ಈಗಿನ ಆಡಳಿತ ಮಂಡಳಿಯು ಕಾನೂನನ್ನು ಗಾಳಿಗೆ ತೂರಿ ತಮಗೆ ಇಷ್ಟ ಬಂದಂತೆ ಮಾರ್ಪಾಡು ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಪ್ರಶ್ನೆ ಮಾಡಿದರೆ ಪೊಲೀಸರಿಗೆ ದೂರು ಕೊಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಶಾಸಕ ಡಾ.ಎಚ್.ಡಿ.ರಂಗನಾಥ್, ಮಾಜಿ ಸಚಿವ ಡಿ.ನಾಗರಾಜಯ್ಯ ಅವರಂತ ನಾಯಕರಿಗೂ ಸಂಘದಲ್ಲಿ ಸದಸ್ಯತ್ವ ನೀಡಿಲ್ಲ. ಇನ್ನು ಸಮುದಾಯದ ಸಾಮಾನ್ಯ ಜನರಿಗೆ ಸದಸ್ಯತ್ವ ನೀಡಲಿದ್ದಾರೇಯೇ ಎಂದು ಪ್ರಶ್ನಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷ$ರಂಗಸ್ವಾಮಿ, ಕೊತ್ತಗೆರೆ ನಾರಾಯಣ್, ಚಂದ್ರಪ್ಪ, ಮುಖಂಡರಾದ ಜೆಸಿಬಿ ಬೆರಪ್ಪ, ಬಿದನಗೆರೆ ಶೀನಿವಾಸ್, ರಂಗಸ್ವಾಮಿ ಮತ್ತಿತರರು ಇದ್ದರು.
1.25 ಲಕ್ಷ ಜನಸಂಖ್ಯೆ
ತಾಲೂಕಿನಲ್ಲಿ ಒಕ್ಕಲಿಗ ಸಮುದಾಯ 1.25 ಲಕ್ಷ ಇದೆ. ಆದರೆ, ಒಕ್ಕಲಿಗ ಸಂಘದಲ್ಲಿ ಕೇವಲ 500 ಮಂದಿ ಮಾತ್ರ ಸದಸ್ಯರನ್ನಾಗಿ ಮಾಡಿಕೊಳ್ಳಲಾಗಿದೆ, ತುಮಕೂರು ಸೇರಿ ಇತರ ತಾಲೂಕಿನಲ್ಲಿ ಹೊಸ ಸದಸ್ಯತ್ವಕ್ಕೆ ಅರ್ಜಿ ಅಹ್ವಾನಿಸಿ ಸದಸ್ಯತ್ವ ನೀಡಿದ್ದಾರೆ. ಆದರೆ, ನಮ್ಮ ತಾಲೂಕಿನಲ್ಲಿ ಏಕೆ ಸದಸ್ಯತ್ವ ನೀಡುತ್ತಿಲ್ಲ? ಎಂದು ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ಮಡಿಕೆಹಳ್ಳಿ ಶಿವಣ್ಣ ಆಕ್ರೋಶ ವ್ಯಕ್ತಪಡಿಸಿದರು. ಸಂದ ಕಾರ್ಯದರ್ಶಿ ಎಚ್.ಜಿ.ಚನ್ನಪ್ಪ ಅವರು, ಹೊಸ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಿ, ಅರ್ಜಿಗಳನ್ನು ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ ಹಿನ್ನಲೆಯಲ್ಲಿ ಪ್ರತಿಭಟನೆ ಕೈಬಿಟ್ಟರು.