ವಕೀಲರ ಮೇಲಿನ ದೌರ್ಜನ್ಯ ಖಂಡನೆ

BLY-8-3
Published on

ಬಳ್ಳಾರಿ : ಚಿಕ್ಕಮಗಳೂರಿನ ಪೋಲಿಸರ ದೌರ್ಜನ್ಯ ಮತ್ತು ವಕೀಲರ ಮೇಲೆ ಸುಳ್ಳು ಕೇಸು ದಾಖಲಿಸಿರುವುದನ್ನು ಖಂಡಿಸಿ ಬಳ್ಳಾರಿ ವಕೀಲರ ಸಂಘದ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ನ್ಯಾಯಿಕ ಕ್ಷೇತ್ರದಲ್ಲಿ ನ್ಯಾಯವಾದಿಗಳು ತಮ್ಮನ್ನು ತಾವು ತೊಡಗಿಸಿಕೊಂಡು ಕಕ್ಷಿದಾರರ ಮತ್ತು ನ್ಯಾಯದ ಹಿತಾಸಕ್ತಿ ಕಾಪಾಡುತ್ತಿರುವ ವಕೀಲರ ಮೇಲೆ ಅಮಾನವೀಯ ಹಲ್ಲೆ ಮತ್ತು ಕೊಲೆಗಳು ನಡೆಯುತ್ತಿದ್ದು, ಇದರಿಂದಾಗಿ ವಕೀಲರು ಮತ್ತು ಅವರ ಕುಟುಂಬದವರು ಹಾಗೂ ಸಮಾಜವು ಅಘಾತಕ್ಕೆ ಒಳಗಾಗಿದೆ. ಈ ಹಿನ್ನೆಲೆಯಲ್ಲಿ ವಕೀಲರ ಸಂರಕ್ಷಣಾ ಕಾಯ್ದೆ ರಚಿಸಿಸುವ ಕೆಲಸ ಮಾಡಬೇಕಿತ್ತು. ಆದರೆ ಇಲ್ಲಿಯವರೆಗೆ ಸರ್ಕಾರವು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ವಿಷಾದನೀಯ ಎಂದು ವಕೀಲರು ಆಕ್ರೋಶ ವ್ಯಕ್ತಪಡಿಸಿದರು.

ಚಿಕ್ಕಮಗಳೂರಿನ ವಕೀಲ ಪ್ರೀತಮ್ ಅವರ ಮೇಲೆ ಪೊಲೀಸರು ಅಮಾನೀಯವಾಗಿ ಹಲ್ಲೆ ನಡೆಸಿದ್ದಲ್ಲದೆ ಸಮಜಾಯಿಸಿ ಕೇಳಲು ಹೋದ ವಕೀಲರನ್ನು ಒಳಗೊಂಡಂತೆ ಒಟ್ಟು ನಾಲ್ಕು ಸುಳ್ಳು ದೂರುಗಳನ್ನು ನೀಡಲಾಗಿದೆ. ಸಮವಸ್ತ್ರದಲ್ಲಿರುವ ಪೊಲೀಸರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅವರನ್ನು ಅಮಾನತುಗೊಳಿಸುವುದಷ್ಟೇ ಅಲ್ಲದೆ ಸೇವೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ಕಲಬುರಗಿ ವಕೀಲ ಈರಣ್ಣಗೌಡ ಪಾಟೀಲ್ ಅವರ ಭೀಕರ ಕೊಲೆ ಪ್ರಕರಣ ನಡೆದಿದ್ದು ಖಂಡನೀಯ. ಸರ್ಕಾರವೂ ವಕೀಲರ ರಕ್ಷಣೆಗೆ ಮುಂದಾಗಬೇಕು. ಇಲ್ಲದಿದ್ದರೆ ರಾಜ್ಯಮಟ್ಟದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಸಿದರು.

ಸಂಘದ ಅಧ್ಯಕ್ಷ ಯರ‌್ರಿಗೌಡ, ಉಪಾಧ್ಯಕ್ಷ ನಾಗರಾಜನಾಯಕ, ಕಾರ್ಯದರ್ಶಿ ರವೀಂದ್ರನಾಥ್, ಜಂಟಿ ಕಾರ್ಯದರ್ಶಿ ತ್ರಿವೇಣಿ ಪತ್ತಾರ, ಖಜಾಂಚಿ ಕೆ.ಎನ್.ಈರೇಶ್, ಸದಸ್ಯ ಬಸವರಾಜ್ ಪಿ ಹಾಗೂ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net