

ಹುಬ್ಬಳ್ಳಿ: ಸಿಎ ಕೋರ್ಸ್ ಆಯ್ಕೆ ಮಾಡಿಕೊಂಡರೆ ಭವಿಷ್ಯದಲ್ಲಿ ಬಹು ಆಯ್ಕೆಗಳು ಲಭಿಸಲಿವೆ. ಜೀವನದಲ್ಲಿಯೂ ಯಶಸ್ಸು ಗಳಿಸಲು ಅನುಕೂಲವಾಗಲಿದೆ ಎಂದು ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯ ಹುಬ್ಬಳ್ಳಿ ಶಾಖೆ ಅಧ್ಯಕ್ಷ ಧನಪಾಲ್ ಮುನೊಳ್ಳಿ ಹೇಳಿದರು.
ತಾಲೂಕಿನ ವರೂರು ಗ್ರಾಮದ ಎಜಿಎಂ ಕಲಾ ಹಾಗೂ ವಾಣಿಜ್ಯ ಪದವಿ ಕಾಲೇಜ್‌ನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸಿಎ ಕೋರ್ಸ್ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ಪ್ರತಿ ವರ್ಷ ನಡೆಸುವ ಫೌಂಡೇಷನ್, ಇಂಟರ್‌ಮೀಡಿಯಟ್ ಹಾಗೂ ಅಂತಿಮ ಪರೀಕ್ಷೆಯ ವಿಧಿ ವಿಧಾನಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು.
ಹುಬ್ಬಳ್ಳಿ ನಗರದ ಹಿರಿಯ ಲೆಕ್ಕಪರಿಶೋಧಕ ವೈ.ಎಂ. ಖಟಾವಕರ ಮಾತನಾಡಿ, ಭಾರತದಲ್ಲಿ ಪಾಸಾದ ಸಿಎ ಅಭ್ಯರ್ಥಿಗಳಿಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಇದೆ. ಬಹು ರಾಷ್ಟ್ರೀಯ ಕಂಪನಿಗಳಲ್ಲಿ ವಿಫುಲ ಉದ್ಯೋಗಾವಕಾಶ ಸಿಗುತ್ತಿದೆ ಎಂದರು.
ಪ್ರಾಂಶುಪಾಲೆ ಪುಷ್ಪಾ ಡಂಗನವರ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಚೇತನ ದಾದುಗೌಡ್ರ, ಮಂಜುನಾಥ ನಾಯಕ, ಮಂಜುಳಾ ಹಾಗೂ ಶಂಕ್ರಮ್ಮ ತಾವರೆ ಇತರರಿದ್ದರು.