

ಭಟ್ಕಳ: ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ವೆುಂಟ್ ವತಿಯಿಂದ ಪಟ್ಟಣದಲ್ಲಿ ಆಯೋಜಿಸಿದ್ದ 24 ಗಂಟೆಗಳ ರಾಷ್ಟ್ರೀಯ ಮಟ್ಟದ ಎಐಟಿಎಂ ಕೋಡ್ಫೆಸ್ಟ್-2025 ಹ್ಯಾಕಥಾನ್, ನಾವೀನ್ಯತೆ, ಸೃಜನಶೀಲತೆ ಮತ್ತು ತಾಂತ್ರಿಕ ಕೌಶಲದ ಅದ್ಭುತ ಪ್ರದರ್ಶನದೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.
ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಂಗಳೂರಿನ ಕ್ರ್ಯಾಶ್ವ್ಯಾಕ್ಸ್ ತಂಡದ ಅಬುಲ್ ಖೈರ್ ಮೊದಲ ಬಹುಮಾನ 60 ಸಾವಿರ ರೂ.ಗಳನ್ನು ಪಡೆದರು. ದ್ವಿತೀಯ ಬಹುಮಾನ 30 ಸಾವಿರಗಳನ್ನು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್, ಮೈಸೂರಿನ ಸೈಫನೋವಾ ತಂಡದ ಹೇಮಂತ್ ಸಿ.ಎಸ್. ಮತ್ತು ಮೊಹಮ್ಮದ್ ಕಮ್ರಾನ್ ಗಳಿಸಿದರು. ತೃತೀಯ ಬಹುಮಾನ 15 ಸಾವಿರ ರೂ.ಗಳನ್ನು ಜಿಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ದಾವಣಗೆರೆಯ ಹಸ್ಲರ್ಸ್ ದೇವ್ ತಂಡದ ಅಹಮದ್ ಅಲಿ ಝುಡ್, ಸೈಯದ್ ಇಯಾನುಲ್ಲಾ ಮತ್ತು ಎಸ್. ತೇಜಸ್ ಪಡೆದರು. ಇದರ ಜೊತೆಗೆ, ಟಾಪ್ 10 ತಂಡಗಳಿಗೆ ವಿಶೇಷ ನಗದು ಬಹುಮಾನಗಳನ್ನು ನೀಡಿ ಗೌರವಿಸಲಾಯಿತು. ದೇಶಾದ್ಯಂತದ 30 ತಂಡಗಳು ಭಾಗವಹಿಸಿದ್ದವು.
ತೀರ್ಪಗಾರರಾಗಿ ಎಐಟಿಎಂನ ಹಳೆಯ ವಿದ್ಯಾರ್ಥಿಗಳು, ನೀವಿಯಸ್ ಸೊಲ್ಯೂಷನ್ಸ್ ಸಂಸ್ಥಾಪಕ ಮೊಹ್ಸಿನ್ ಖಾನ್, ಎಮರ್ಟೆಕ್ಸ್ ಇನ್ಪಾಮೇಷನ್ ಟೆಕ್ನಾಲಜಿಸ್ನ ತಂತ್ರಜ್ಞಾನ ಮುಖ್ಯಸ್ಥ ಮುಬೀನ್ ಜುಕಾಕು, ವಿನ್ಟೀಮ್ ಗ್ಲೋಬಲ್ ಸಂಸ್ಥಾಪಕ ವಸೀಮ್ ಅಹ್ಮದ್, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ. ಜೆ. ಅನ್ವರ್ ಶಾಥಿಕ್ ಮತ್ತು ಪ್ರಾಧ್ಯಾಪಕ ಡಾ. ಡೇನಿಯಲ್ ಫ್ರಾನ್ಸಿಸ್ ಕಾರ್ಯ ನಿರ್ವಹಿಸಿದರು.
ರಿಜಿಸ್ಟ್ರಾರ್ ಪ್ರೊ. ಜಾಹಿದ್ ಖರುರಿ ಸ್ವಾಗತಿಸಿದರು. ಎಐಟಿಎಂ ಕಾರ್ಯದರ್ಶಿ ಮೊಹಿದ್ದೀನ್ ರುಕ್ನದ್ದೀನ್, ಪ್ರಾಂಶುಪಾಲ ಡಾ. ಕೆ. ಫಜ್ಲುರ್ ರೆಹಮಾನ್ ಮಾತನಾಡಿದರು. ಸಂಯೋಜಕ ಫಾರ್ಖಲಿತ್ ರಿದಾ ಮಾನ್ವಿ ಕಾರ್ಯಕ್ರಮ ನಿರ್ವಹಿಸಿದರು.