ಭಗವದ್ಗೀತೆ ಪಾರಾಯಣದಿಂದ ಪಾಪ ದೂರ

Swarnavalli Shree
Published on

ಶಿರಸಿ: ಪ್ರತಿನಿತ್ಯ ಭಗವದ್ಗೀತೆಯ ಪಾರಾಯಣದೊಂದಿಗೆ ಯೋಗ, ಪ್ರಾಣಾಯಾಮ ಮಾಡಿದರೆ ಹಿಂದಿನ ಎಲ್ಲ ಪಾಪಗಳು ಕರಗುತ್ತವೆ. ಹೊಸ ಪಾಪಗಳೂ ಹುಟ್ಟುವುದಿಲ್ಲ ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಮಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ನುಡಿದರು.

ಸ್ವರ್ಣವಲ್ಲೀಯಲ್ಲಿ ಚಾತುರ್ವಸ್ಯ ವೃತಾಚರಣೆ ಸಂಕಲ್ಪಿತ ಶ್ರೀಗಳ ಗುರುಪಾದ ಸೇವೆ ಸಲ್ಲಿಸಿದ ಮಂಜುಗುಣಿ ಸೀಮೆಯ ಶಿಷ್ಯರನ್ನು ಉದ್ದೇಶಿಸಿ ಅವರು ಆಶೀರ್ವಚನ ನೀಡಿದರು.

ಎಲ್ಲ ಆಚಾರ್ಯರು ಅಪ್ಪಿ ತಪ್ಪಿಯೂ ಸ್ವಾಧ್ಯಾಯ ಬಿಡಬೇಡ ಎಂದಿದ್ದಾರೆ. ದಿನವೂ ವೇದದ ಅಧ್ಯಯನ ಮಾಡಬೇಕು ಎಂಬುದು ಅದರ ಅರ್ಥ. ಗುರುಕುಲದ ಅಧ್ಯಯನ ಬೇರೆ, ಮನೆಗೆ ಬಂದ ಬಳಿಕವೂ ಬದುಕಿರುವ ತನಕ ಓದುತ್ತಿರಬೇಕು ಎಂಬುದು ಆಚಾರ್ಯರ ಸೂಚನೆ.

ಆದರೆ, ವೇದ ಎಲ್ಲರೂ ಓದಿಲ್ಲ. ಅವರಿಗೆ ಸ್ವಾಧ್ಯಾಯ ಪ್ರಯೋಜನ ಸಿಗಲು ಹಾಗೂ ಅವರಿಗೋಸ್ಕರವೇ ಭಗವದ್ಗೀತೆಯನ್ನು ಭಗವಂತ ನೀಡಿದ್ದಾನೆ ಎಂದರು.

ಇಡೀ ಮಹಾಭಾರತ ಕೂಡ ವೇದದ ಭಾಗವಾಗಿ ಅದಕ್ಕೋಸ್ಕರವೇ ಬಂದಿದೆ ಎನ್ನುತ್ತಾರೆ.

ಇಡೀ ಮಹಾಭಾರತ ಕೂಡ ವೇದಗಳ ಪರ್ಯಾಯವಾಗಿ ಕೊಡುತ್ತದೆ. ಅದರ ಮಧ್ಯದಲ್ಲಿ ಇರುವುದೇ ಗೀತೆ ಎಂದ ಶ್ರೀಗಳು, ಈ ಗೀತೆಯಿರುವ ಪುಟ್ಟ ಗ್ರಂಥ ಓದಲು ಎಲ್ಲರಿಗೂ ಸಾಧ್ಯವಿದೆ. ಗೀತೆ ಪಾರಾಯಣ ಮಾಡಿದರೆ ಸ್ವಾಧ್ಯಾಯವೂ ಹೌದು.

ಶ್ರದ್ಧೆಯಿಂದ ಭಗವದ್ಗೀತೆ ಓದಿದರೆ ವೇದ ಓದಿದ ಫಲ ಸಿಗುತ್ತದೆ ಎಂದರು.

ಈ ವೇಳೆ ರತ್ನಾಕರ ಹೆಗಡೆ ಚಿಕ್ಕಡಿ, ರಾಮಚಂದ್ರ ಹೆಗಡೆ ಕಲ್ಲಾರೆಮನೆ, ಶ್ರೀಕಾಂತ ಹೆಗಡೆ ಅತ್ತಿಕಾರಗದ್ದೆ ಇತರರಿದ್ದರು.

ಭಗವದ್ಗೀತೆ ಪುಸ್ತಕ ಮನೆಯಲ್ಲಿ ಇದ್ದರೆ ದುಷ್ಟ ಶಕ್ತಿಯೂ ಬರದು. ಗೀತೆಗೆ ಅಷ್ಟು ಮಹತ್ವ ಇದೆ. ಗೀತೆಯ ಅಧ್ಯಾಯಕ್ಕೆ ಮಹತ್ವ ಇದೆ. ಗೀತೆಯ ಅರ್ಥ ತಿಳಿದು ಓದಿದರೆ ಪ್ರಶಸ್ತ. ಅರ್ಥ ಗೊತ್ತಿಲ್ಲದೇ ಓದಿದರೂ ಪ್ರಯೋಜನವಿದೆ. ಗೀತಾಸ್ವಾಧ್ಯಾಯವನ್ನು ತಿಲಕರು, ವಿನೋಬಾ ಬಾವೆ, ಗಾಂಧೀಜಿ ಅವರು ಸಮಯ ಸಿಕ್ಕಾಗ ಓದುತ್ತಿದ್ದರು. ಗೀತೆಯ ಪುಸ್ತಕ ಸಣ್ಣದಿದ್ದರೂ ಒಳಗೆ ಪ್ರವೇಶ ಮಾಡಿದರೆ ಅಲ್ಲೊಂದು ಪ್ರಪಂಚ ಇದೆ. ಗೀತೆ ತಾಯಿ ಅಂದಿದ್ದರು ಗಾಂಧೀಜಿ ಎಂದೂ ಉಲ್ಲೇಖಿಸಿದರು. | ಸ್ವರ್ಣವಲ್ಲೀ ಸ್ವಾಮೀಜಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net