ದುಶ್ಚಟಗಳಿಂದ ದೂರವಿದ್ದರೆ ಆಯುಷ್ಯ ವೃದ್ಧಿ

2 nrp 1
ಎನ್.ಆರ್.ಪುರ ತಾಲೂಕು ನಾಗರಮಕ್ಕಿ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ವಿಶ್ವ ತಂಬಾಕು ವಿರೋಧಿ ದಿನಾಚರಣೆಯಲ್ಲಿ ಬಾಲಕೃಷ್ಣ ಭಟ್ ಮಾತನಾಡಿದರು. ಸುಧೀರ್, ಪ್ರಕಾಶ್, ವಿಜೇಂದ್ರ ಇತರರಿದ್ದರು.
Published on

ಎನ್.ಆರ್.ಪುರ: ಕ್ಯಾನ್ಸರ್ ರೋಗವು ಶೇ.50 ಜನರಿಗೆ ತಂಬಾಕು ಉತ್ಪನ್ನಗಳ ಸೇವನೆಯಿಂದಲೇ ಬರುತ್ತಿದೆ ಎಂದು ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯ ಬಾಲಕೃಷ್ಣ ಭಟ್ ತಿಳಿಸಿದರು.

ನಾಗರಮಕ್ಕಿ ದೇವಸ್ಥಾನದ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುದುರೆಗುಂಡಿ ವಲಯದ ನಾಗರಮಕ್ಕಿ ಒಕ್ಕೂಟದ ತ್ರೈಮಾಸಿಕ ಸಭೆಯಲ್ಲಿ ಏರ್ಪಡಿಸಿದ್ದ ವಿಶ್ವ ತಂಬಾಕು ವಿರೋಧಿ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಯುವ ಜನರು ಹೆಚ್ಚಾಗಿ ಗುಟ್ಕಾ, ಗಾಂಜಾ ಸೇವನೆ ಮಾಡುತ್ತಿದ್ದಾರೆ. ಕೆಲವು ಪಾಲಕರು ತಮ್ಮ ಮಕ್ಕಳಿಂದಲೇ ಅಂಗಡಿಯಿಂದ ಮದ್ಯ, ಸಿಗರೇಟ್, ಬೀಡಿ ತರಿಸಿಕೊಳ್ಳುತ್ತಾರೆ. ಇದನ್ನು ನೋಡುತ್ತಾ ಬೆಳೆಯುವ ಮಕ್ಕಳು ಸಹ ದುಶ್ಚಟಕ್ಕೆ ಬಲಿಯಾಗುತ್ತಾರೆ ಎಂದು ದೂರಿದರು.
ಪ್ರಾರಂಭದಲ್ಲಿ ಅನೇಕರು ಹುಟ್ಟಿದಹಬ್ಬ ಆಚರಣೆ ಹೆಸರಿನಲ್ಲಿ ಮದ್ಯ ಸೇವನೆ ಪ್ರಾರಂಭಿಸುತ್ತಾರೆ. ನಂತರ ಅದು ಚಟವಾಗಿ ಪರಿಣಮಿಸುತ್ತದೆ. ಪಾಲಕರು ತಮ್ಮ ಮಕ್ಕಳ ಹೆಚ್ಚು ಗಮನ ನೀಡಬೇಕು. ದುಶ್ಚಟಗಳಿಂದ ದೂರವಿದ್ದರೆ ಸಮಾಜ ಚೆನ್ನಾಗಿರುತ್ತದೆ, ಆಯುಷ್ಯ ಸಹ ಹೆಚ್ಚಾಗಲಿದೆ. ಕಡಿಮೆ ಆದಾಯವಿದ್ದರೂ ಹಣ ಉಳಿತಾಯವಾಗಲಿದೆ. ಒಮ್ಮೆ ದುಶ್ಚಟಕ್ಕೆ ಬಿದ್ದವರಿಗೆ ಸಂಪಾದನೆ ಮಾಡುವುದು ಕಷ್ಟವಾಗಲಿದೆ. ಅವರ ಸಂಸಾರ ಬೀದಿಗೆ ಬರಲಿದೆ. ಸಮಾಜದಲ್ಲಿ ಅಂತವರಿಗೆ ಗೌರವ ಸಿಗುವುದಿಲ್ಲ. ನಿಮ್ಮ ಸಂಪಾದನೆಯ ಹಣವೆಲ್ಲಾ ಮುಂದಿನ ದಿನಗಳಲ್ಲಿ ಸಂಸಾರಕ್ಕಿಂತ ಆಸ್ಪತ್ರೆಯವರಿಗೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೆಟ್ಟ ಹವ್ಯಾಸ ಇರುವ ಇರುವ ಮಿತ್ರರಿಂದ ದೂರವಿರಿ. ಅಂತವರಿಂದಲೇ ನಿಮಗೂ ದುಶ್ಚಟಗಳು ಅಂಟಿಕೊಳ್ಳುತ್ತದೆ. ಎಷ್ಟೇ ಸಂಪಾದನೆ ಮಾಡಿದರೂ ಕೆಟ್ಟ ಅಭ್ಯಾಸಗಳಿಗೆ ದಾಸರಾದರೆ ಹಣ ಉಳಿಯುವುದಿಲ್ಲ ಎಂದರು.
ಯೋಜನೆಯ ಕುದುರೆಗುಂಡಿ ವಲಯ ಮೇಲ್ವಿಚಾರಕ ಸುಧೀರ್ ಮಾತನಾಡಿ, ಪ್ರತಿ ಸದಸ್ಯರು ಒಕ್ಕೂಟದ ಸಭೆಗೆ ತಪ್ಪದೆ ಹಾಜರಾಗಬೇಕು. ಇದುವರೆಗೆ ನಾಗರಮಕ್ಕಿ ಒಕ್ಕೂಟದ 40 ಸ್ವಸಹಾಯ ಸಂಘಕ್ಕೆ 2 ಕೋಟಿ 65 ಸಾವಿರ ರೂ. ಸಾಲ ನೀಡಿದ್ದೇವೆ. ಯಾವುದೇ ಕಂತು ಬಾಕಿ ಇಲ್ಲ. ಕಳೆದ ತ್ರೈಮಾಸಿಕ ಸಭೆಯಿಂದ ಈ ಸಭೆಯವರೆಗೆ ಪ್ರಗತಿ ನಿಧಿಯಲ್ಲಿ 85 ಲಕ್ಷ ರೂ. ಸಾಲ ನೀಡಿಲಾಗಿದೆ ಎಂದರು.
ಸೇವಾ ಪ್ರತಿನಿಧಿ ಪ್ರಕಾಶ್ ಮಾತನಾಡಿ, ಸ್ವಸಹಾಯ ಸಂಘಗಳಲ್ಲಿ ಕನಿಷ್ಠ 10 ಸದಸ್ಯರು ಇರಬೇಕು. ಪ್ರಗತಿ ಬಂಧು ಗುಂಪಿನಲ್ಲಿ ಐವರು ಇರಬೇಕು. ನಾಗರಮಕ್ಕಿ ಒಕ್ಕೂಟದ ಪದಾಧಿಕಾರಿಗಳು ಉತ್ತಮಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಒಕ್ಕೂಟದ ಅಧ್ಯಕ್ಷ ಮನೋಹರ್ ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ವಿಜೇಂದ್ರ, ಉಪಾಧ್ಯಕ್ಷ ಈಶ್ವರ್, ಕಾರ್ಯದರ್ಶಿ ವಿಜಯ, ಶೌರ್ಯ ವಿಪತ್ತು ತಂಡದ ಸದಸ್ಯ ಕೃಷ್ಣಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net