

ಮಂಗಳೂರು : ಕೇಂದ್ರ ಶಿಕ್ಷಣ ಸಚಿವಾಲಯದಿಂದ ಡೀಮ್ಡ್ ವಿಶ್ವವಿದ್ಯಾಲಯ ಮಾನ್ಯತೆ ಪಡೆದ ಕೆಲವು ಶಿಕ್ಷಣ ಸಂಸ್ಥೆಗಳು
ಭಾರತೀಯ ಭಾಷೆ ಮತ್ತು ಸಂಸ್ಕೃತಿಯನ್ನು ನಿರ್ಲಕ್ಷಿೃಸುತ್ತಿವೆ. ಇಂತಹ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ರಾಜ್ಯಾಧ್ಯಕ್ಷ ಡಾ.ನಾ.ಮೊಗಸಾಲೆ ಒತ್ತಾಯಿಸಿದ್ದಾರೆ.
ಡೀಮ್ಡ್ ವಿ.ವಿ.ಮಾನ್ಯತೆ ಪಡೆದ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲ ವಿಷಯಗಳನ್ನು ಇಂಗ್ಲೀಷ್‌ನಲ್ಲಿ ಬೋಧಿಸಲಾಗುತ್ತಿದೆ. ಆದರೆ ಈ ಹಿಂದೆ ಎರಡು ವರ್ಷಗಳಿಗೆ ಬೋಧಿಸಲಾಗುತಿದ್ದ ಸಂಸ್ಕೃತ, ಕನ್ನಡ, ಹಿಂದಿ, ಮಲಯಾಳ ಸಹಿತ ಇತರ ಭಾರತೀಯ ಭಾಷೆಗಳನ್ನು ಒಂದು ವರ್ಷಕ್ಕೆ ಸೀಮಿತಗೊಳಿಸಲಾಗಿದೆ. ಪಠ್ಯದ ಅವಧಿಗಳನ್ನು ಕೂಡಾ ಕಡಿಮೆಗೊಳಿಸಿ ಭಾರತೀಯ ಭಾಷೆಗಳನ್ನು ನಾಶ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ವತಿಯಿಂದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ.
ಭಾರತೀಯ ಭಾಷೆ,ಸಂಸ್ಕೃತಿ, ಪರಂಪರೆಗಳಿಂದ ಯುವ ಸಮುದಾಯವನ್ನು ದೂರ ಮಾಡುವ ಮತ್ತು ವಿದೇಶಿ ಮಾದರಿ ಶಿಕ್ಷಣ ಅಳವಡಿಸುವ ಸಂಚು ಇದರ ಹಿಂದಿದೆ. ಅಂತಹ ಡೀಮ್ಡ್ ವಿ.ವಿ.ಗಳ ಪಠ್ಯಕ್ರಮವನ್ನು ಪರಿಶೀಲಿಸಿ ಸೂಕ್ತ ಕ್ರಮ ವಹಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.