ಕರ್ತವ್ಯದಲ್ಲಿ ಭ್ರಷ್ಟಾಚಾರ ಸಲ್ಲ: ಅವ್ಯವಹಾರ ಕಂಅಡುಬಂದರೆ ಕಠಿಣ ಕ್ರಮ: ಸಚಿವ ಶರಣಪ್ರಕಾಶ ಪಾಟೀಲ್ ತಾಕೀತು

oplus_2
oplus_2
Published on

ರಾಯಚೂರು: ಜಿಲ್ಲೆಯ ಅಭಿವೃದ್ಧಿ ಸರ್ಕಾರದಿಂದ ಯೋಜನೆಗಳನ್ನು ರೂಪಿಸಲಾಗುತ್ತದೆ ಆದರೆ ತಾಲೂಕು ಮತ್ತು ಗ್ರಾಮೀಣ ಭಾಗದಲ್ಲಿ ಅಧಿಕಾರಿಗಳಿಂದ ಯೋಜನೆಗಳು ಜನರ ಕೈತಲುಪುತ್ತಿಲ್ಲ ಅಲ್ಲದೇ ಯೋಜನೆಗಳ ಅನುಷ್ಠಾನದಲ್ಲಿ ಅಕ್ರಮ ಕೇಳಿ ಬರುತ್ತಿದ್ದು, ಈ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಸೋಮವಾರ ಮಾತನಾಡಿ, ಸಿಂಧನೂರಿನಲ್ಲಿ ಜೋಳ ಖರೀದಿಯಲ್ಲಿ ಭಾರಿ ಅಕ್ರಮ ನಡೆದಿದ್ದು, ಖರೀದಿ ಕೇಂದ್ರಕ್ಕೆ ಜೋಳ ಮಾರಾಟ ಮಾಡಿದ ರೈತರಿಗೆ ಡಿಬಿಟಿ ಮೂಲಕ ಹಣ ಪಾವತಿ ಮಾಡಲಾಗಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದ್ದು, ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಬೇಕು ಅಕ್ರಮ ಕಂಡುಬಂದಲ್ಲಿ ನಿರ್ಧಾಕ್ಷೃಣವಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

ಜೋಳ ಖರೀದಿಯಲ್ಲಿ ಅಕ್ರಮದಲ್ಲಿ ಕೃಷಿ ಮಾರಾಟ ಮಂಡಳಿಯ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ದೂರುಗಳು ಕೇಳಿಬರುತ್ತಿದ್ದು, ಡಿಸಿ, ಸಿಇಒ ಪರಿಶೀಲನೆ ನಡೆಸಬೇಕು ಎಂದರು. ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಕ್ಷೇತ್ರ ಹೆಚ್ಚಳ ಮಾಡಲು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಜಿಲ್ಲೆಯಲ್ಲಿ ಈರುಳ್ಳಿ ಬೆಳೆದ ರೈತರಿಂದ ಉತ್ಪನ್ನವನ್ನು ಎಪಿಎಂಸಿಯಲ್ಲಿ ಖರಿದಿಸಲು ಇರುವ ತೊಡಕುಗಳ ಬಗ್ಗೆ ಸಮಗ್ರವಾದ ವರದಿಯನ್ನು ಸಿದ್ಧಪಡಿಸಿ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಈ ಬಾರಿ ತೊಗರಿ ಬೆಳೆ ಹೆಚ್ಚಾಗಿ ಬೆಳೆದಿರುವ ಕಾರಣ ಖರೀದಿ ಕೇಂದ್ರ ಸ್ಥಾಪನೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಅರಣ್ಯ ಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡು ಲೇಔಟ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಈ ವಿಚಾರವಾಗಿ ಕೋರ್ಟ್‌ನಲ್ಲಿ ಪ್ರಕರಣ ನಡೆಯುತ್ತಿದ್ದರೆ ಕೋರ್ಟ್ ಆದೇಶದನ್ವಯ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು. ಪಶು ಇಲಾಖೆಗೆ ಸಂಬಂಧಿಸಿದಂತೆ ಜಾನುವಾರು ಗಣತಿಯನ್ನು ಈ ವರ್ಷ ಮಾಡಬೇಕಾಗಿರುವುದರಿಂದ ಗಣತಿಯಲ್ಲಿ ಲೋಪದೋಷಗಳಾದಂತೆ ನೊಡಿಕೊಳ್ಳಬೇಕು. ಕಡ್ಡಾಯವಾಗಿ ಅಧಿಕಾರಿಗಳು ಗಣತಿಯನ್ನು ಸ್ಥಳಕ್ಕೆ ತೆರಳಿ ಮಾಡಬೇಕು ಇದನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ಪರೀಲಿಸಬೇಕು. ಜಿಲ್ಲೆಯಲ್ಲಿರುವ 108 ಪಶು ವೈದ್ಯ ಸಂಸ್ಥೆಗಳು ಸುಸ್ಥಿತಿಯಲ್ಲಿರುವ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು. ಮತ್ತು ಜಾನುವಾರು ಗಣತಿ ಬಗ್ಗೆ ಮುಂಚಿತವಾಗಿಯೇ ಗ್ರಾಮಗಳ ಜನರಿಗೆ ಮಾಹಿತಿ ತಲುಪಿಸಬೇಕು ಎಂದು ಹೇಳಿದರು.

ಜಿಲ್ಲೆಯ ಅಭಿವೃದ್ಧಿಗೆ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳ ನಿರ್ಲಕ್ಷೃತನ ಸಹಿಸಲು ಸಾಧ್ಯವಿಲ್ಲ. ಅಧಿಕಾರಿಗಳು ಎಚ್ಚೆತ್ತುಕೊಂಡರೇ ಉಳಿತು ಇಲ್ಲವಾದಲ್ಲಿ ಕ್ರಮ ತಪ್ಪಿದ್ದಲ್ಲ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್ ಬೋಸರಾಜು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ, ಉಪಾಧ್ಯಕ್ಷ ಎಂ.ಬಿ.ರೇಜು, ಶಾಸಕರಾದ ಡಾ.ಶಿವರಾಜ್ ಪಾಟೀಲ್, ಬಸನಗೌಡ ದದ್ದಲ್, ಹಂಪನಗೌಡ ಬಾದರ್ಲಿ, ಹಂಪಯ್ಯ ನಾಯಕ, ಬಸನಗೌಡ ತುರ್ವಿಹಾಳ, ಎಂಎಲ್ಸಿಗಳಾದ ಶರಣಗೌಡ ಪಾಟೀಲ್ ಬಯ್ಯಪೂರ, ಎ.ವಸಂತಕುಮಾರ, ಬಸನಗೌಡ ಬಾದರ್ಲಿ, ಚಂದ್ರಶೇಖರ ಪಾಟೀಲ್, ಡಿಸಿ ಕೆ.ನಿತೀಶ, ಜಿ.ಪಂ ಸಿಇಒ ರಾಹುಲ್ ತುಕಾರಂ ಪಾಂಡ್ವೆ, ಎಸ್ಪಿ ಎಂ.ಪುಟ್ಟಮಾದಯ್ಯ ಸೇರಿದಂತೆ ಇತರರಿದ್ದರು.

ಇಬ್ಬರು ಅಧಿಕಾರಿಗಳಿಗೆ ಶೋಕಾಸ್:

ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತ್ರೈಮಾಸಿಕ ಸಭೆಗೆ ಪೂರ್ವ ಮಾಹಿತಿ ನೀಡದೇ ಗೈರಾಗಿದ್ದ ಕೃಷಿ ಮಾರಾಟ ಮಂಡಳಿ ವ್ಯವಸ್ಥಾಪಕ ಶಿವಬಸ್ಸಪ್ಪ ಹಾಗೂ ಜಿಲ್ಲಾ ಅರಣ್ಯ ಇಲಾಖೆಯ ಅಧಿಕಾರಿ ಪ್ರವೀಣ ಎನ್ನುವವರಿಗೆ ಶೋಕಾಸ್ ನೋಟಿಸ್ ನೀಡಬೇಕು. ಕಾರಣ ಸಮಂಜಸವನಿಸದೇ ಇದ್ದಲ್ಲಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಡಿಸಿಗೆ ಸೂಚನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net