

ಬೆಳ್ತಂಗಡಿ: ಗ್ರಾಮಸಭೆಗೆ ಅಧಿಕಾರಿಗಳು ಗೈರುಹಾಜರಾದ ಕಾರಣ ಗ್ರಾಮಸಭೆಯನ್ನು ಮುಂದೂಡಲು ಗ್ರಾಮಸ್ಥರು ಒತ್ತಾಯಿಸಿದ ಘಟನೆ ಚಾರ್ಮಾಡಿ ಗ್ರಾಮಸಭೆಯಲ್ಲಿ ನಡೆದಿದೆ.
ಚಾರ್ಮಾಡಿ ಗ್ರಾಪಂ ಸಭೆ ಅಧ್ಯಕ್ಷೆ ಶಾರದಾ ಎ.ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಭವನದಲ್ಲಿ ನಡೆಯಿತು. ಮಾರ್ಗದರ್ಶಕ ಅಧಿಕಾರಿಯಾಗಿ ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಗ್ರಾಮಸಭೆ ನಡೆಸಿಕೊಟ್ಟರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಜಾಗ ಪರಿಶೀಲನೆ ಮಾಡುವಾಗ ತಾರತಮ್ಯ ಮಾಡಿದ್ದಾರೆ ಎಂದು ಗ್ರಾಮಸ್ಥ ನಜೀರ್ ಹೇಳಿದರು. ಪಿಡಿಒ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಸಭೆಗೆ ಬಂದಿಲ್ಲ. ಅಧಿಕಾರಿಗಳನ್ನು ಮುಂದಿನ 15 ದಿನಗಳಲ್ಲಿ ಕರೆಯಿಸಿ ಗ್ರಾಮಸ್ಥರಿಗೆ ಮಾಹಿತಿ ನೀಡಲಾಗುವುದು ಎಂದರು. ಬಳಿಕ ಗ್ರಾಮಸಭೆ ನಡೆಸಲು ಗ್ರಾಮಸ್ಥರು ಅವಕಾಶ ಕಲ್ಪಿಸಿದರು. ಕಳೆದ ಹತ್ತು ವರ್ಷಗಳಿಂದ ಕತ್ತರಿಗುಡ್ಡೆ ಮಸೀದಿ ಹತ್ತಿರ ವಿದ್ಯುತ್ ತಂತಿ ನೇತಾಡಿಕೊಂಡಿದೆ. ಇಲಾಖೆಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಹೇಳಿದಾಗ ತಕ್ಷಣ ಸರಿಪಡಿಸುವ ಕ್ರಮ ಕೈಗೊಳ್ಳುತ್ತೇವೆ ಎಂದು ಮೆಸ್ಕಾಂ ಅಧಿಕಾರಿ ಕೃಷ್ಣ ಗೌಡ ತಿಳಿಸಿದರು.
ನೆರಿಯ ಗ್ರಾಮಕ್ಕೆ ಹೆಚ್ಚುವರಿ ಬಸ್ ಕಲ್ಪಿಸಬೇಕು, ಧರ್ಮಸ್ಥಳದಿಂದ-ಗಂಡಿಬಾಗಿಲಿಗೆ ಬರುವ ಬಸ್ಸನ್ನು ಶಾಂತ್ಯಾಯದಿಂದ ಬಸದಿವರೆಗೆ ನಿಲುಗಡೆ ಮಾಡಬೇಕು, ಪೆರಿಯಡ್ಕ, ಕಾಂಜಾಲು ಚರ್ಚ್‌ನಿಂದ ಕುತ್ರಿಜಾಲು ನೆರಿಯ ಗ್ರಾಮಕ್ಕೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಬೇಕು ಎಂದು ಗ್ರಾಮಸ್ಥರು ತಿಳಿಸಿದಾಗ ಮುಂದಿನ ದಿನಗಳಲ್ಲಿ ಬಸ್ಸನ್ನು ನಿಲ್ಲಿಸಲು ಸೂಚಿಸುತ್ತೇನೆ ಮತ್ತು ಬಸ್ ವ್ಯವಸ್ಥೆಯ ಬಗ್ಗೆ ಲಿಖಿತ ರೂಪದಲ್ಲಿ ಮನವಿ ನೀಡಿ ಎಂದು ಸಾರಿಗೆ ಇಲಾಖೆಯ ಅಧಿಕಾರಿ ದಾವೂದ್ ತಿಳಿಸಿದರು. ಉಜಿರೆಯಿಂದ-ಶಿವಮೊಗ್ಗಕ್ಕೆ ಹೋಗುವ ಬಸ್ಸಿನಲ್ಲಿ ಕಕ್ಕಿಂಜೆಯಲ್ಲಿ ಇಳಿಸಬೇಕಿದ್ದ ಯುವತಿಯನ್ನು ಅರ್ಧ ದಾರಿಯಲ್ಲಿ ಬಿಟ್ಟು ಹೋಗಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದಾಗ ಇದರ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು. ಪಿಡಿಒ ಪುರುಷೋತ್ತಮ ಸ್ವಾಗತಿಸಿದರು. ಅನುಪಾಲನ ವರದಿಯನ್ನು ಕಾರ್ಯದರ್ಶಿ ಕುಂಞ ಕೆ.ವಾಚಿಸಿದರು.