ತಲೆಮರೆಸಿಕೊಂಡಿದ್ದ ಕೊಲೆ ಯತ್ನದ ಆರೋಪಿ ಬಂಧನ

POLICE-CAP
Published on

ಶ್ರೀರಂಗಪಟ್ಟಣ: ತಾಲೂಕಿನ ಅರಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿ ನ್ಯಾಯಾಲಯದಿಂದ ಜಾಮಿನು ಪಡೆದು ಬಳಿಕ ಹಾಜರಾಗದೆ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಪತ್ತೆಹಚ್ಚಿದ ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನ ಯರಗನಹಳ್ಳಿಯ ನಿವಾಸಿ ಆರೋಪಿ ಸುರೇಶ್ (52) ಬಂಧಿತ ಆರೋಪಿ. ತಾಲೂಕಿನ ಮಹದೇವಪುರ-ಮೈಸೂರು ರಸ್ತೆಯ ಹಂಪಾಪುರ ಗೇಟ್ ಸಮೀಪದ ಪ್ರಗತಿ ಫಾರಂ ಬಳಿ ಕಳೆದ 2013ರ ಮೇ ತಿಂಗಳಲ್ಲಿ 6 ಜನರ ಗುಂಪು ಅಂದು ವ್ಯಕ್ತಿಯೋರ್ವನ ಮೇಲೆ ನಡೆಸಿದ ಕೊಲೆ ಪ್ರಯತ್ನ ಪ್ರಕರಣದಲ್ಲಿ ಈತ ಪ್ರಮುಖ ಆರೋಪಿಯಾಗಿದ್ದ.

ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಸುರೇಶ್, ವ್ಯಕ್ತಿಯೋರ್ವನ ಮೇಲೆ ಗುಂಪುಗೂಡಿ ಹಲ್ಲೆ ನಡೆಸಿ ಆತನ ಮೇಲೆ ಕಲ್ಲು ಎತ್ತು ಹಾಕಿ ಸಾಯಿಸಲು ಯತ್ನಿಸಿದ್ದ. ಪ್ರಕರಣ ಠಾಣೆಯಲ್ಲಿ ದಾಖಲಾದ ಬಳಿಕ ಎ.1 ಆರೋಪಿಯಾಗಿ ಬಂಧಿತನಾಗಿದ್ದ. ತದನಂತರ ನ್ಯಾಯಾಲಯದಿಂದ ಜಾಮೀನು ಪಡೆದಿದ್ದ ಈತ, ಠಾಣೆ ಹಾಗೂ ನ್ಯಾಯಾಲಯಕ್ಕೂ ಹಾಜರಾಗದೆ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ.

ಈತನ ಸೆರೆಗೆ ಪೊಲೀಸರು ಅಂದಿನಿಂದ ತಲಾಷ್ ನಡೆಸುತ್ತಿದ್ದು, ಖಚಿತ ಮಾಹಿತಿ ಮೇರೆಗೆ ಉಡುಪಿ ಜಿಲ್ಲೆ, ಬ್ರಹ್ಮಾವರ ಠಾಣೆ ವ್ಯಾಪ್ತಿಯ ಹಂಗಾರಕಟ್ಟೆ ಗ್ರಾಮದ ಸಮುದ್ರ ತೀರದ ಬಾರ್‌ನಲ್ಲಿ ಈತ ಕೆಲಸ ಮಾಡಿಕೊಂಡು ಇರುವುದನ್ನು ಪತ್ತೆ ಹಚ್ಚಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ನಿರ್ದೇಶನದಲ್ಲಿ ಡಿವೈಎಸ್ಪಿ ಎಚ್.ಎಸ್.ಮುರುಳಿ ಹಾಗೂ ಸರ್ಕಲ್ ಇನ್ಸ್‌ಪೆಕ್ಟರ್ ಟಿ.ಎಂ.ಪುನೀತ್ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ವಿನೋದ್ ಕುಮಾರ್ ಸೂಚನೆಯಂತೆ ಸಿಬ್ಬಂದಿ ಎಂ.ಆರ್.ಮೂರ್ತಿ ಮತ್ತು ಎಚ್.ವಿ.ಮಹೇಂದ್ರ ಕೋಟಾ ಠಾಣೆಯ ಪೊಲೀಸರ ಸಹಕಾರದೊಂದಿಗೆ ಆರೋಪಿಯನ್ನು ಬಂಧಿಸಿ ಕರೆತಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net