ತಲೆ ಮರೆಸಿಕೊಂಡಿದ್ದ್ದ ಗಾಂಜಾ ಮಾರಾಟಗಾರ ಬಂಧನ

Published on

ಮೈಸೂರು: ತಲೆಮರೆಸಿಕೊಂಡು ಓಡಾಡುತ್ತಿದ್ದ ಗಾಂಜಾ ಸಾಗಣೆ, ಮಾರಾಟ ಮಾಡುತ್ತಿದ್ದವನನ್ನು ಬಂಧಿಸಿರುವ ನಗರ ಅಪರಾಧ ಪತ್ತೆದಳ(ಸಿಸಿಬಿ) ಪೊಲೀಸರು, 4.5 ಲಕ್ಷ ರೂ. ಮೌಲ್ಯದ 14 ಕೆ.ಜಿ., 150 ಗ್ರಾಂ ತೂಕದ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಪುಷ್ಪಪುರದ ಶ್ರೀನಿವಾಸ್ ಅಲಿಯಾಸ್ ಗಾಂಜಾ ಶೀನಾ (54)ನನ್ನು ಬಂಧಿಸಿರುವ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ನ್ಯಾಯಾಧೀಶರು, ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ಮೈಸೂರು-ಬೆಂಗಳೂರು ರಸ್ತೆಯ ಮಣಿಪಾಲ್ ಆಸ್ಪತ್ರೆ ಜಂಕ್ಷನ್ ಬಳಿ ಸೆ. 7 ರಂದು ವಾಹನದಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿರುವ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಆರೋಪಿ ಗಾಂಜಾ ಸಹಿತ ಸಿಕ್ಕಿ ಬಿದ್ದಿದ್ದ.

ಈತನ ವಿರುದ್ಧ ಆಂಧ್ರ ಪ್ರದೇಶ ಸೇರಿದಂತೆ ವಿವಿಧಡೆ 12 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ಜಿಲ್ಲೆಯಲ್ಲಿ 4, ಮೈಸೂರಿನಲ್ಲಿ 6, ಚಾಮರಾಜನಗರದ ಬೇಗೂರು ಠಾಣೆಯಲ್ಲಿ 1, ವಿಶಾಖಪಟ್ಟಣ ಮುದಗಲ್ಲು ಪೊಲೀಸ್ ಠಾಣೆಯಲ್ಲಿ 1 ಪ್ರಕರಣಗಳು ಇವೆ. ಜಾಮೀನು ಪಡೆದು ಮಾದಕ ವಸ್ತು ಸಾಗಣೆ ಮತ್ತು ಮಾರಾಟ ಕೃತ್ಯದಲ್ಲಿ ಭಾಗಿಯಾಗುತ್ತಿದ್ದ ಎನ್ನಲಾಗಿದೆ.

ಅಲ್ಲದೆ 8 ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇದ್ದು, ಆತನ ವಿರುದ್ಧ ಹಲವು ಜಾಮೀನು ರಹಿತ ವಾರಂಟ್ ಜಾರಿಯಾಗಿದ್ದವು. ನ್ಯಾಯಾಲಯಕ್ಕೆ ಹಾಜರಾಗದೆ ಒಡಿಶಾದಲ್ಲಿ ತಲೆ ಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿತ್ತು. ತಂಡ ಒಡಿಶಾ, ಆಂಧ್ರಪ್ರದೇಶ, ಕೇರಳ ಮತ್ತು ತಮಿಳುನಾಡಿನಲ್ಲಿ ಶೋಧ ಕಾರ್ಯದಲ್ಲಿ ತೊಡಗಿತ್ತು. ಇತ್ತೀಚೆಗೆ ಗಾಂಜಾ ಸಾಗಿಸಲು ಚಾಮರಾಜನಗರ, ಮೈಸೂರಿಗೆ ಬಂದಿದ್ದಾಗ ಸಿಕ್ಕಿ ಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈತ ಅಲ್ಲದೆ ಈತನ ಮಕ್ಕಳಾದ ಸುರೇಶ್ ಮತ್ತು ನಂದೀಶ್ ಕೂಡ ಗಾಂಜಾ ಮಾರಾಟ, ಸಾಗಣೆ ಪ್ರಕರಣದಲ್ಲಿ ಭಾಗಿಯಾಗಿದ್ದು, ಅವರ ವಿರುದ್ಧ ನಾಲ್ಕು ಪ್ರಕರಣಗಳು ದಾಖಲಾಗಿದೆ.

ಸಿಸಿಬಿ ಘಟಕದ ಎಸಿಪಿ ಮಹಮ್ಮದ್ ಷರೀಫ್ ರಾವುತರ್ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್ ಶಬ್ಬೀರ್ ಹುಸೇನ್, ಎಸ್‌ಐ ಲೇಪಾಕ್ಷ, ಸಿಬ್ಬಂದಿ ರಾಮಸ್ವಾಮಿ, ಮಧುಕುಮಾರ್, ಪ್ರಕಾಶ್ ರಾಥೋಡ್ ಇತರರು ದಾಳಿ ನಡೆಸಿದ್ದರು.

ಕಾರ್ಯಾಚರಣೆ ಚುರುಕು:

ನಗರದಲ್ಲಿ ಮಾದಕ ಜಾಲವನ್ನು ಮಟ್ಟ ಹಾಕಲು ಕಾರ್ಯಾಚರಣೆ ಚುರುಕುಗೊಳಿಸಲಾಗುವುದು. ಮೇಲಿಂದ ಮೇಲೆ ಮಾದಕ ವಸ್ತು ಪತ್ತೆ ಕಾರ್ಯ ನಡೆಯಲಿದ್ದು, ಆರೋಪಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಕಮಿಷ್ನರ್ ಸೀಮಾ ಲಾಟ್ಕರ್ ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net