ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

mng--23 Aug Abdul kabeer
Published on

ಮಂಗಳೂರು: ನಗರ ಪೊಲೀಸ್ ಕಮೀಷನರೇಟ್ ಹಾಗೂ ದ.ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ ದನಕಳ್ಳತನ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಕಸಬಾ ಬೆಂಗರೆ ನಿವಾಸಿ ಅಬ್ದುಲ್ ಕಬೀರ್ ಪಾರಿವಾಳ ಕಬೀರ್ (35)ನನ್ನು ನಗರದ ಅಪರಾಧ ಪತ್ತೆದಳದ ಪೊಲೀಸರು ಬಂಧಿಸಿದ್ದಾರೆ.


ಕರ್ತವ್ಯಕ್ಕೆ ಅಡ್ಡಿ: ಆರೋಪಿ ಕಬೀರ್ ದನಕಳವು ಪ್ರಕರಣದಲ್ಲಿ ಭಾಗಿಯಾಗಿ ಬಂಧನವಾದ ಬಳಿಕ ನ್ಯಾಯಾಲಯದಿಂದ ಜಾಮೀನು ಪಡೆದು, ವಿಚಾರಣೆ ಸಮಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈತನ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಆತನ ಬಂಧನಕ್ಕೆ ತೆರಳಿದ ಸಮಯ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನಿಸಿದ. ಆದರೆ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.


ಕ್ರಿಮಿನಲ್ ಹಿನ್ನಲೆ: ಆರೋಪಿ ವಿರುದ್ದ ಮಂಗಳೂರು ನಗರದ ಪಾಂಡೇಶ್ವರ, ಬಂದರು, ಕಂಕನಾಡಿ ನಗರ, ಉಳ್ಳಾಲ, ಪಣಂಬೂರು, ಬಜಪೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಉಪ್ಪಿನಂಗಡಿ ಪೊಲೀಸ್ ಠಾಣೆ ಸೇರಿದಂತೆ 15 ಹೆಚ್ಚು ದನಕಳ್ಳತನ ಪ್ರಕರಣಗಳು ದಾಖಲಾಗಿದೆ. ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ನ್ಯಾಯಾಲಯಕ್ಕೆ ಹಾಜರಾಗದೇ ಸುಮಾರು 7 ತಿಂಗಳಿನಿಂದ ತಲೆಮರೆಸಿಕೊಂಡಿದ್ದನು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net